ಗೋಣಿಕೊಪ್ಪಲು, ಮೇ 9: ಅರುವತೊಕ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಟ್ಟು, ಹುದೂರು ಗ್ರಾಮದ ಸೀತಾಕಾಲೋನಿಯ ನಿವಾಸಿ ಯರವರ ಮಣಿ (40) ಎಂಬವರು ವಿದ್ಯುತ್ ತಗಲಿ ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ ಮಾಪಿಳೆತೋಡುವಿನ ತೋಟ ವೊಂದರಲ್ಲಿ ಮರ ಕಸಿ ಕೆಲಸ ಮಾಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದ್ದು, ಮರ ಹತ್ತಲು ಬಳಸಿದ್ದ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿ ದುರಂತ ಸಂಭವಿಸಿದೆ. ದುರ್ಧೈವಿ ಮಣಿ ಮರ ಹತ್ತಿ ಕಸಿ ಮಾಡಿದರೆ, ಆತನ ಪತ್ನಿ ಸೌಮ್ಯ ಎಂಬಾಕೆ ಕಡಿದು ಹಾಕಿದ ಮರದ ಕೊಂಬೆಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು. ಒಂದು ಮರ ಕಸಿ ಮಾಡಿ ಮತ್ತೊಂದು ಮರಕ್ಕೆ ಏರಲು ಅಲ್ಯುಮಿನಿಯಂ ಏಣಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಗ ವಿದ್ಯುತ್ ತಂತಿಗೆ ತಾಗಿ ಈ ಘಟನೆ ಸಂಭವಿಸಿದೆ.

ತನ್ನ ಕಣ್ಣೆದುರಿಗೆ ನಡೆದ ಘಟನೆ ನೋಡಿ ಹೆಂಡತಿ ಆಘಾತಕ್ಕೆ ಒಳಗಾಗಿದ್ದಾರೆ. ಮೃತ ಮಣಿ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳನ್ನು ಅಗಲಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಮನೆ ಯಜ ಮಾನನನ್ನು ಕಳೆದುಕೊಂಡು ಕುಟುಂಬದವರು ಕಂಗಾಲಾಗಿದ್ದಾರೆ. ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ. ಸುರೇಶ್ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.

ಕೊಡಗಿನ ಕಾಫಿ ತೋಟಗಳಲ್ಲಿ ಇತ್ತೀಚೆಗೆ ಅಲ್ಯುಮಿನಿಯಂ ಏಣಿಯಿಂದ ಹಲವಾರು ಕಾರ್ಮಿಕರು ಸಾವನ್ನಪ್ಪುತ್ತಿದ್ದರೂ ಮಾಲೀಕರು ಈ ಬಗ್ಗೆ ಎಚ್ಚರಗೊಳ್ಳದಿರುವದು ಇಂತಹ ಘಟನೆ ಆಗಾಗ್ಗೆ ಮರುಕಳಿಸು ವಂತಾಗಿದೆ. - ಹೆಚ್.ಕೆ.ಜಗದೀಶ್