ಸೋಮವಾರಪೇಟೆ, ಮೇ 10: ಶಾಂತಳ್ಳಿ ಪ್ರಕೃತಿ ಸಾಹಿತ್ಯ ಬಳಗ, ಬೆಂಗಳೂರು ಸಾಹಿತ್ಯ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಸಮೀಪದ ಶಾಂತಳ್ಳಿ ಗ್ರಾಮದ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾರ್ವಜನಿಕರಿಗೆ "ಆಧ್ಯಾತ್ಮ ಚಿಂತನ" ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಹುಲಿವಾನ ನರಸಿಂಹಸ್ವಾಮಿ ಮಾತನಾಡಿ, ಪರಿಶುದ್ಧವಾದ ಆತ್ಮ, ಪವಿತ್ರವಾದ ಮನಸ್ಸಿನಿಂದ ಮಾಡುವ ಕಾಯಕದಲ್ಲಿ ದೇವರಿದ್ದಾನೆ. ಗುಡಿಗೋಪುರದಲ್ಲಿ ದೇವರನ್ನು ಹುಡುಕದೆ ಜನಪರ ಕೆಲಸಗಳನ್ನು ಮಾಡುತ್ತ ದೇವರನ್ನು ಕಾಣಬೇಕು ಎಂದರು.

ಹುಲಿವಾನ ನರಸಿಂಹಸ್ವಾಮಿ ಅವರು ರಚಿಸಿರುವ "ತಳಿರು ತೋರಣ" ಎಂಬ ಪುಸ್ತಕವನ್ನು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ನಿವೃತ್ತ ಯೋಧ ಪ್ರೇಮ್‍ಕುಮಾರ್, ತಾಪಂ ಸದಸ್ಯ ಧರ್ಮಪ್ಪ, ಶ್ರೀ ಕುಮಾರಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ ರಘು, ಪ್ರಕೃತಿ ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕಾ ಉಪಸ್ಥಿತರಿದ್ದರು.

ಮಹಿಳೆಯರಿಗೆ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ವೇದ ಪ್ರಥಮ, ಜಯಂತಿ ಹೆಗ್ಗಡೆ ದ್ವಿತೀಯ, ರಾಧ ಸುಬ್ಬಯ್ಯ ತೃತೀಯ ಸ್ಥಾನಗಳಿಸಿದರು.