ಬೆಂಗಳೂರು, ಮೇ 9: ಲೋಕಸಭಾ ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ರಾಂತಿಗಾಗಿ ತಂಗಿದ್ದ ಮಡಿಕೇರಿಯ ರೆಸಾರ್ಟ್ನಲ್ಲಿಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಲಿರುವದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮಡಿಕೇರಿ-ಮೈಸೂರು ರಸ್ತೆಯಲ್ಲಿ ಹಸಿರಿನ ಕಾಫಿ ತೋಟದ ನಡುವೆ ಇರುವ 'ಇಬ್ಬನಿ' ರೆಸಾರ್ಟ್ಗೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಪುತ್ರ, ಶಾಸಕ ಯತೀಂದ್ರ ಜೊತೆ ತಂಗಿದ್ದು, ಎರಡು ದಿನಗಳ ಕಾಲ ರಾಜಕೀಯ ಒತ್ತಡ ಹಾಗೂ ವಿಧಾನಸಭೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದು ವಿಶ್ರಾಂತಿ ಪಡೆದು ವಾಪಸಾಗಿದ್ದರು. ಸಿದ್ದರಾಮಯ್ಯ ಮಡಿಕೇರಿಯಲ್ಲಿ ತಂಗಿದ್ದಂತಹ ಸಂದರ್ಭದಲ್ಲಿ ಮೈಸೂರಿನ ಕೆಲ ಆಪ್ತರನ್ನು ಹೊರತುಪಡಿಸಿದರೆ ಇನ್ನುಳಿದ ಪಕ್ಷದ ಮುಖಂಡರ ಭೇಟಿಯಿಂದ, ಮಾಧ್ಯಮಗಳಿಂದ ಅವರು ದೂರವೇ ಇದ್ದರು. ಇನ್ನು ಸಿದ್ದರಾಮಯ್ಯ ಮಡಿಕೇರಿಯಲ್ಲಿ ತಂಗಿದ್ದಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಕೂಗು ಹೊರಬಿದ್ದಿತ್ತು. ಎಂ.ಬಿ. ಪಾಟೀಲ್ ಸೇರಿದಂತೆ ಸಿದ್ದರಾಮಯ್ಯ ಬಣದ ಹಲವರು ಸಿದ್ದರಾಮಯ್ಯ ಅವರೇ ತಮ್ಮ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇಬ್ಬನಿ ರೆಸಾರ್ಟ್ನಲ್ಲಿಯೇ ಇದ್ದು ಎಲ್ಲಾ ರಾಜಕೀಯ ಆಗುಹೋಗುಗಳನ್ನು ಸಿದ್ದರಾಮಯ್ಯ ಪರಾಮರ್ಶೆ ನಡೆಸಿದ್ದರು. ರೆಸಾರ್ಟ್ ಹೊರ ಬಂದ ನಂತರ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂದು ಹೇಳಿಕೆ ನೀಡುವ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ತಾತ್ಕಾಲಿಕವಾಗಿ ವಿರಾಮ ಹಾಡಿದ್ದರು.