ಸೋಮವಾರಪೇಟೆ, ಮೇ 9: ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದ್ದು, ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಹೇಳಿದರು.
ತಾಲೂಕು ಬಾಲಭವನ ಸೊಸೈಟಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ನಿರ್ಮಲ, ಸಿಬ್ಬಂದಿ ವಿಮಲ, ಫಿಲೋಮಿನಾ, ಕರಾಟೆ ತರಬೇತುದಾರ ಮಹಾಂತೇಶ್ ಉಪಸ್ಥಿತರಿದ್ದರು.
ಆದ್ಯ ಪ್ರಾರ್ಥಿಸಿದರು. ಕಳೆದ 15 ದಿನಗಳಿಂದ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕರಾಟೆ, ನೃತ್ಯ, ಹಾಡುಗಾರಿಕೆ, ಚಿತ್ರಕಲೆ, ಕ್ಲೇ ಮಾಡಲಿಂಗ್ ಸೇರಿದಂತೆ ಇನ್ನಿತರ ಪ್ರಾಕಾರಗಳ ಬಗ್ಗೆ ತರಬೇತಿ ನೀಡಲಾಯಿತು.