ಕುಶಾಲನಗರ / ಕೂಡಿಗೆ, ಮೇ 10: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ರಂಗಸಮುದ್ರ ಗ್ರಾಮದಲ್ಲಿರುವ ಚಿಕ್ಲಿಹೊಳೆ ಜಂಕ್ಷನ್ನಲ್ಲಿ ಜನವರಿ 11ರಂದು ನರ್ಸರಿ ಮಾಡಲು ಜಾಗವನ್ನು ಭೋಗ್ಯಕ್ಕೆ ನೀಡದಿರುವ ವಿಚಾರದಲ್ಲಿ ಪಿ.ಕೆ. ಹೇಮರಾಜ್ ಎಂಬಾತ ಕೆ.ಕೆ. ರಾಜು ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ರಾಜು ಚಿಕಿತ್ಸೆ ಫಲಿಸದೆ ಏಪ್ರಿಲ್ 14ರಂದು ಕೊನೆಯುಸಿರೆಳೆದಿದ್ದರು. ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಹೇಮರಾಜನನ್ನು ನಿನ್ನೆದಿನ ಕಾಟಕೇರಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಎಸ್ಪಿ ಡಾ. ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರಶೆಟ್ಟಿ, ಕುಶಾಲನಗರ ಸಿಐ ದಿನೇಶ್ ಕುಮಾರ್ ಬಿ.ಎಸ್., ಠಾಣಾಧಿಕಾರಿ ನಂದೀಶ್ ಕುಮಾರ್, ಕುಶಾಲನಗರ ವಿಶೇಷ ಅಪರಾಧ ಪತ್ತೆ ತಂಡದ ರವಿ ಹೆಚ್.ಎಸ್., ಮಂಜುನಾಥ ಎ., ನಾಗರಾಜ್, ರಮೇಶ್ ಎನ್.ಆರ್., ಸಂಪತ್ ರೈ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.