ಕುಶಾಲನಗರ, ಮೇ 10: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಪಂಚಾಯಿತಿ ಅಧೀನದಲ್ಲಿರುವ ಹಳೆಯ ವಾಣಿಜ್ಯ ಮಳಿಗೆಗಳ ನೆಲಸಮ ಕಾರ್ಯ ಭರದಿಂದ ಸಾಗಿದೆ. ನೂತನ ವಾಣಿಜ್ಯ ಮಳಿಗೆ ನಿರ್ಮಾಣ ಹಿನ್ನೆಲೆ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.

ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕೈಗೊಂಡ ಉದ್ದೇಶದಂತೆ 1.10 ಎಕರೆ ಪ್ರದೇಶದಲ್ಲಿ ರೂ. 7.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಭವ್ಯ ಕಟ್ಟಡವೊಂದು ಮುಂದಿನ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸುಜಯ್‍ಕುಮಾರ್ ತಿಳಿಸಿದ್ದಾರೆ. ಪಂಚಾಯಿತಿಗೆ ಸೇರಿದ 22 ವಾಣಿಜ್ಯ ಮಳಿಗೆಗಳ ಹಲವು ಬಾಡಿಗೆದಾರರು ನ್ಯಾಯಾಲಯಕ್ಕೆ ಮೊರೆ ಹೋದ ಹಿನ್ನೆಲೆ ಮಳಿಗೆಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಪಂಚಾಯಿತಿಗೆ ತೊಡಕು ಉಂಟಾಗಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನೂತನ ವಾಣಿಜ್ಯ ಸಂಕೀರ್ಣ ಅಡಿಪಾಯ ಕಾರ್ಯಕ್ಕೆ ಪ್ರಗತಿಯಲ್ಲಿದ್ದು ಸೆಲ್ಲಾರ್, ನೆಲಮಹಡಿ ಮತ್ತು 1ನೇ ಅಂತಸ್ತು ಒಳಗೊಂಡ ಕಟ್ಟಡ 2020 ರ ಆರಂಭದಲ್ಲಿ ಪೂರ್ಣಗೊಳ್ಳುವದು. ನೂತನ ಸಂಕೀರ್ಣದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿ, ಅಭಿಯಂತರರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಸೇರಿದಂತೆ ಪ್ರತ್ಯೇಕ ಕಚೇರಿಗಳು ಹಾಗೂ ಸಭಾಂಗಣ ನಿರ್ಮಾಣಗೊಳ್ಳಲಿದೆ. 61 ವಾಣಿಜ್ಯ ಮಳಿಗೆಗಳು ಹಾಗೂ ನೆಲ ಅಂತಸ್ತಿನಲ್ಲಿ 150 ರಷ್ಟು ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಸೆಲ್ಲಾರ್ ನಿರ್ಮಿಸಿ ಸ್ಥಳಾವಕಾಶ ಒದಗಿಸಲಾಗುವದು ಎಂದು ತಿಳಿಸಿದ್ದಾರೆ. - ಸಿಂಚು