*ಗೋಣಿಕೊಪ್ಪಲು, ಮೇ 10: ಪೊನ್ನಂಪೇಟೆ ತೊರೆಬೀದಿಯಲ್ಲಿ ಬಂದಂತಮ್ಮ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬಂದಂತಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ, ಜನಾರ್ಧನ್, ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಮುಂಜಾನೆ 7 ಗಂಟೆಗೆ ದೇವಸ್ಥಾನದ ಬಳಿ ದೇವತೆಗೆ ನೈವೇಧ್ಯ ಅರ್ಪಿಸಿ ಬಳಿಕ ನಾಲ್ವರು ಬಾಲಕಿರಿಗೆ ಹೂ, ಎಲೆ ಅಡಿಕೆ, ತೆಂಗಿನ ಕಾಯಿ ತುಂಬಿದ ಕಲಶ ಹೊರಿಸಲಾಯಿತು. ಸೀರೆ ಉಟ್ಟ ಪುಟಾಣಿ ಬಾಲಕಿಯರು ಕಲಶವನ್ನು ತಲೆಯ ಮೇಲೆ ಹೊತ್ತು ಊರಿನ ಪ್ರಮುಖ ರಸ್ತೆಯಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಹೊರಟರು. ಇವರ ಜತೆಯಲ್ಲಿ ಬಡಾವಣೆಯ ಜನತೆ ಹಾಗೂ ದೇವಸ್ಥಾನ ಸಮಿತಿಯ ಮುಖಂಡರು ಸಾಗಿದರು.
ಬಳಿಕ ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನದ ಬಳಿಗೆ ಬಂದು ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಆನಂತರ ಮೆರವಣಿಗೆ ಮೂಲಕ ಮತ್ತೆ ಬಂದಂತಮ್ಮನ ದೇವಸ್ಥಾನದ ಬಳಿಗೆ ತೆರಳಿದರು. ಅಲ್ಲಿ ದೇವರಿಗೆ ಹರಕೆ ತೀರಿಸಿದರು.