ಸೋಮವಾರಪೇಟೆ, ಮೇ 10: ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ 100 ವರ್ಷಗಳು ತುಂಬಿದ ಹಿನ್ನೆಲೆ ಮೂರು ದಿನಗಳ ಕಾಲ ಆಯೋಜಿಸ ಲಾಗಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬೆಳಗ್ಗಿನ ಜಾವ 5.30 ರಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. 6 ಗಂಟೆಗೆ ಗಣಪತಿ ಹೋಮ, 8.30ಕ್ಕೆ ಶಂಕರ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ನಂತರ ಮಂಗಳವಾದ್ಯ, ಡೊಳ್ಳು ಕುಣಿತ ಹಾಗೂ ವೀರಗಾಸೆಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಂಕರಾ ಚಾರ್ಯರ ಭಾವಚಿತ್ರವನ್ನಿಟ್ಟು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಅರ್ಚಕ ಪ್ರಸನ್ನಭಟ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಉಪಾಧ್ಯಕ್ಷ ಕೌಶಿಕ್, ಮಾಜಿ ಅಧ್ಯಕ್ಷ ಎಸ್.ಆರ್. ಸೋಮೇಶ್, ಖಜಾಂಚಿ ಶ್ಯಾಮ್‍ಸುಂದರ್ ಮತ್ತಿತರರು ಇದ್ದರು. ತಾ. 11 ರಂದು (ಇಂದು) ಬ್ರಾಹ್ಮಣ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಸಾಧಕರಿಗೆ ಸನ್ಮಾನ, ವಿಜೇತರಿಗೆ ಬಹುಮಾನ, ಸ್ಥಳೀಯ ರಮ್ಯಶ್ರೀ ಹಾಗೂ ಮೈಸೂರಿನ ವರ್ಷಿಣಿ ಯವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ತಾ. 12 ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಖಿಲ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಪುತ್ತೂರಾಯ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಬ್ರಾಹ್ಮಣ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ, ರಾಜ್ಯ ಸಮಿತಿಯ ಸುಧೀಂದ್ರಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.