ಮಡಿಕೇರಿ, ಮೇ 9: ಹಾಕಿ ಇಂಡಿಯಾ ಸಂಸ್ಥೆ ವತಿಯಿಂದ 9ನೇ ವರ್ಷದ ಸಬ್ ಜ್ಯೂನಿಯರ್ ಬಾಲಕರ ಎ ಡಿವಿಜನ್ ರಾಷ್ಟ್ರೀಯ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದ್ದು, ತಾ. 11 ರಿಂದ 22ರ ವರೆಗೆ ಚತ್ತೀಸ್ಘರ್ನ ರಾಯ್ಪುರದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ತಂಡದಲ್ಲಿ ಕೊಡಗಿನ ಬಾಲಕರು ಸಿಂಹಪಾಲು ಪಡೆದುಕೊಂಡಿದ್ದು, 18 ಮಂದಿ ಆಟಗಾರರಲ್ಲಿ 12 ಮಂದಿ ಕೊಡಗಿನವರಾಗಿದ್ದಾರೆ.ಕೂಡಿಗೆ ಕ್ರೀಡಾ ಶಾಲೆಯ ಮಜ್ಜಿ ಗಣೇಶ್ ನಾಯಕತ್ವದ ತಂಡದಲ್ಲಿ ಕೊಡಗಿನ ಆಟಗಾರರಾದ ಜಿ. ವಿಶ್ವಾಸ್, ಎ.ಹೆಚ್. ದೀಕ್ಷಿತ್, ಮಾರ್ಚಂಡ ನಾಚಪ್ಪ, ಮಂಡೇಪಂಡ ಗೌತಂಡ, ಬಿ. ಅರ್ಜುನ್, ವಿ. ವಿಕಾಸ್, ಕನ್ನಿಕಂಡ ದೇವಯ್ಯ, ಈ.ಬಿ. ವಿನಾಯಕ್ (ಗೋಲ್ ಕೀಪರ್), ಚೆರಿಯಮನೆ ಲಿವಿನ್ ಪೆಮ್ಮಯ್ಯ, ದೇವೇಂದ್ರ, ದರ್ಶನ್ ಆರ್.ಎಸ್. ಸೇರಿದಂತೆ ಬೆಂಗಳೂರಿನಿಂದ ಇತರೆಡೆಗಳಿಂದ ರಾಮಾಜಿ ಪ್ರಶಾಂತ್ ಕುಮಾರ್, ಅಂಕಿತ್, ಪ್ರೇಂ, ಸಂದೀಪ್ ಪಾಲ್ (ಗೋಲ್ ಕೀಪರ್) ವಿಶಾಲ್ ಕುಮಾರ್, ನಿತಿನ್ ದಶರಥ್ ಕಾಟ್ಕೆ ಭಾಗವಹಿಸಲಿದ್ದಾರೆ.
ತಂಡದ ತರಬೇತುದಾರರಾಗಿ ಮನೋಹರ್ ಕಾಟ್ಕೆ ಹಾಗೂ ವ್ಯವಸ್ಥಾಪಕರಾಗಿ ರಾಹುಲ್ ಕಾಟ್ಕೆ ತೆರಳಿದ್ದಾರೆ. ಕರ್ನಾಟಕ ತಂಡವು ಬಿ ಗುಂಪಿನಲ್ಲಿದ್ದು, ಉತ್ತರ ಪ್ರದೇಶ, ಮಧ್ಯಪ್ರದೇಶ, ಭೂಪಾಲ್ ಹಾಗೂ ಮಹಾರಾಷ್ಟ್ರ ತಂಡಗಳೊಂದಿಗೆ ಸೆಣೆಸಲಿದೆ ಎಂದು ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.