ಮಡಿಕೇರಿ, ಮೇ 9: ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳಲು ಗ್ರಾಹಕರು ಬೆರಳಚ್ಚು ನೀಡಬೇಕೆಂಬ ಇಲಾಖೆಯ ಈಗಿನ ಕ್ರಮದಿಂದಾಗಿ ಕೊಡಗು ಜಿಲ್ಲೆಯ ಜನತೆಗೆ ಸಮಸ್ಯೆಯಾಗುತ್ತಿದ್ದು, ಇದನ್ನು ಕೈಬಿಡಬೇಕೆಂದು ಸಹಕಾರ ಭಾರತಿ ಸಂಸ್ಥೆ ಒತ್ತಾಯಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಸಹಕಾರ ಭಾರತೀಯ ಜಿಲ್ಲಾಧ್ಯಕ್ಷ ಎನ್.ಎ. ರವಿಬಸಪ್ಪ ಅವರು ಜಿಲ್ಲೆಯಲ್ಲಿ ಮುಂದಿನ ತಿಂಗಳಿನಿಂದ ಮಳೆಗಾಲವೂ ಆರಂಭಗೊಳ್ಳಲಿದೆ ಎಂದಿದ್ದಾರೆ. ಬಹುತೇಕ ಕಡೆಗಳಲ್ಲಿ ನೆಟ್‍ವರ್ಕ್ ಸಮಸ್ಯೆ ಹಾಗೂ ವಿದ್ಯುತ್ ತೊಂದರೆ ಉಂಟಾಗುವದರಿಂದ ಪಡಿತರ ಪಡೆಯಲು ಗ್ರಾಹಕರು ಇನ್ನಷ್ಟು ತೊಂದರೆ ಎದುರಿಸಬೇಕಾಗುತ್ತದೆ.

7 ಕೆ.ಜಿ. ಅಕ್ಕಿಗಾಗಿ ಸುಮಾರು ಎರಡು - ಮೂರು ದಿನ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯಬೇಕಾಗುವಂತಾಗಿದೆ. ಬೆರಳಚ್ಚು ವ್ಯವಸ್ಥೆಯಿಂದ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲವೇ ಅಧಿಕವಾಗುತ್ತಿದ್ದು, ಸರಕಾರ ಜಿಲ್ಲೆಯಲ್ಲಿ ಈ ಕ್ರಮವನ್ನು ಕೈಬಿಡಬೇಕೆಂದು ರವಿಬಸಪ್ಪ ಆಗ್ರಹಿಸಿದ್ದಾರೆ. ಸಹಕಾರ ಭಾರತಿಯಿಂದ ಈ ಕುರಿತು ಮನವಿ ಸಲ್ಲಿಸುವದಾಗಿಯೂ ಅವರು ತಿಳಿಸಿದ್ದಾರೆ.