ಮಡಿಕೇರಿ, ಮೇ 9: ನಗರದ ರಾಣಿಪೇಟೆ ರಸ್ತೆಯನ್ನು ಮುಂದಿನ ಒಂದು ವಾರದೊಳಗೆ ದುರಸ್ತಿ ಪಡಿಸದಿದ್ದಲ್ಲಿ ಸಂಘ-ಸಂಸ್ಥೆಗಳನ್ನು ಮತ್ತು ಸಾರ್ವಜನಿಕರನ್ನು ಸಂಘಟಿಸಿ ಪ್ರತಿಭಟನೆ ನಡೆಸುವದಾಗಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಎಚ್ಚರಿಸಿದ್ದಾರೆ.

ಚೌಕ್‍ನಿಂದ ಕಾಲೇಜಿನತ್ತ ತೆರಳುವ ರಸ್ತೆಯಿಂದ ಬಲಬದಿಗೆ ಹಾದು ಹೋಗಿರುವ ಈ ರಸ್ತೆ ಶ್ರೀ ಮುತ್ತಪ್ಪ ದೇವಸ್ಥಾನ, ಕಾನ್ವೆಂಟ್‍ನತ್ತ ಮತ್ತು ಅಬ್ಬಿಫಾಲ್ಸ್ ಮಾತ್ರವಲ್ಲದೆ, ಮೆಡಿಕಲ್ ಕಾಲೇಜಿಗೆ ತೆರಳಲು ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಒಂದೆರಡು ವರ್ಷಗಳಿಂದ ಕಾಲೇಜು ರಸ್ತೆಯ ಜಂಕ್ಷನ್‍ನಿಂದ ಮುತ್ತಪ್ಪ ದೇವಸ್ಥಾನದವರೆಗೆ ಹೊಂಡ ಗುಂಡಿಗಳಾಗಿ ಯಾವದೇ ವಾಹನಗಳು ಸಂಚರಿಸಲು, ಪಾದಚಾರಿಗಳು ನಡೆದಾಡಲಾಗದಷ್ಟು ಅಯೋಗ್ಯ ಸ್ಥಿತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಆಯುಕ್ತರನ್ನು ಸಂಪರ್ಕಿಸಿದಾಗ ಟೆಂಡರ್ ಆಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಕೂಡಲೇ ರಸ್ತೆಯ ದುರಸ್ತಿ ಕಾರ್ಯವನ್ನು ಆರಂಭಿಸಲಿದ್ದಾರೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಮುಂದಿನ ಒಂದು ವಾರದೊಳಗೆ ಈ ರಸ್ತೆಯನ್ನು ಡಾಮರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಮಲ್ಲಿಕಾರ್ಜುನ ನಗರದ ಬಳಿ ರಸ್ತೆ ತಡೆನಡೆಸಿ ಪ್ರತಿಭಟನೆ ನಡೆಸಲಾಗುವದು ಎಂದು ರಜಾಕ್ ಎಚ್ಚರಿಸಿದ್ದಾರೆ.

ನಗರದ ಮಹದೇವಪೇಟೆ ರಸ್ತೆಯನ್ನು ಕಾಂಕ್ರಿಟ್‍ಕರಣಗೊಳಿಸಿ ಈಗಾಗಲೇ ವರ್ಷ ಮೇಲಾಗಿದೆ. ಇದೇ ಸಂದರ್ಭ ರಸ್ತೆಯ ಎರಡೂ ಬದಿಯ ಚರಂಡಿ ಮೇಲೆ ಜನತೆಯ ಸುರಕ್ಷತೆಗಾಗಿ ರಸ್ತೆ ಬದಿಗೆ ಇಂಟರ್ ಲಾಕ್ ಅಳವಡಿಸಬೇಕಿತ್ತು. ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಗುತ್ತಿಗೆದಾರ ಸ್ಲ್ಯಾಬ್ ಮತ್ತು ಇಂಟರ್‍ಲಾಕ್ ಅಳವಡಿಸದೆ ನಿರ್ಲಕ್ಷ್ಯದಿಂದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಮತ್ತೆ ಮಹದೇವಪೇಟೆಯಲ್ಲಿ ಸಮಸ್ಯೆ ಆರಂಭವಾಗಿದೆ. ಜನತೆಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಶ್ರೀವತ್ಸ