ಮಡಿಕೇರಿ, ಮೇ 9: ಗೌಹಾತಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ಜಾರ್ಖಂಡ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅನಿರುದ್ಧ ಬೋಸರನ್ನು ಸುಪ್ರೀಂ ಕೋರ್ಟ್‍ಗೆ ನೇಮಕ ಮಾಡುವ ಸಂಬಂಧ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಹಿಂದಿರುಗಿಸಿ ಮರುಪರಿಶೀಲನೆ ಮಾಡುವಂತೆ ಕೇಂದ್ರ ಸರಕಾರ ಕೇಳಿಕೊಂಡಿದೆ.ಭಾರತದ ಮುಖ್ಯ ನ್ಯಾಯಾಧೀಶ ರಾದ ರಂಜಾನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎನ್.ವಿ. ರಾಮಣ್ಣ, ಅರುಣ್ ಮಿಶ್ರ ಮತ್ತು ಆರ್.ಎಫ್. ನಾರಿಮನ್ ರವರನ್ನೊಳಗೊಂಡ ಐದು ಸದಸ್ಯರುಗಳುಳ್ಳ ಕೊಲಿಜಿಯಂ ನಿನ್ನೆ ಮಧ್ಯಾಹ್ನ ಅನೌಪಚಾರಿಕವಾಗಿ ಸಭೆ ನಡೆಸಿ ತನ್ನ ಏಪ್ರಿಲ್ 12ರ ಶಿಫಾರಸ್ಸಿನ ಕುರಿತಾಗಿ ಕೇಂದ್ರದ ಆಕ್ಷೇಪಣೆಗಳನ್ನು ಪರಿಶೀಲಿಸಿತು. ಈ ಇಬ್ಬರು ಮುಖ್ಯ ನ್ಯಾಯ ಮೂರ್ತಿಗಳ ಜ್ಯೇಷ್ಠತೆಯ ಕುರಿತಾಗಿ ಮಾತ್ರ ಕೇಂದ್ರವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆಯೇ ಹೊರತಾಗಿ ಅವರ ಪ್ರಾಮಾಣಿಕತೆಯ ಕುರಿತಾಗಿ ಅಲ್ಲವೆಂದು ಮೂಲಗಳು ತಿಳಿಸಿವೆ.

ದೇಶದ ನ್ಯಾಯಮೂರ್ತಿಗಳ ಸಮಗ್ರ ಪಟ್ಟಿಯಲ್ಲಿ ಈ ಇಬ್ಬರು ನ್ಯಾಯಮೂರ್ತಿಗಳ ಸೇವಾ ಹಿರಿತನವನ್ನು ಕೊಲಿಜಿಯಂ ಈಗಾಗಲೇ ಪರಿಶೀಲಿಸಿದ್ದು, ಈ ವಾರಾಂತ್ಯದ ಸಭೆಯ ನಂತರ ಮತ್ತೊಮ್ಮೆ ಅವರ ಹೆಸರುಗಳನ್ನೇ ಪುನರುಚ್ಚಿಸಿ ಶಿಫಾರಸು ಮಾಡಲಿದೆಯೆಂದು ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್‍ನಲ್ಲಿ ಅವಶ್ಯಕತೆ ಯಿರುವ ಒಟ್ಟು 31 ನ್ಯಾಯಮೂರ್ತಿ ಗಳಲ್ಲಿ ಸಿಜೆಐ ಸೇರಿ ಪ್ರಸ್ತುತ 27 ನ್ಯಾಯಮೂರ್ತಿಗಳಿದ್ದಾರೆ.

ಜನವರಿ 6, 2006ರಂದು ಕರ್ನಾಟಕ ಹೈಕೋರ್ಟ್‍ನ ನ್ಯಾಯ ಮೂರ್ತಿಗಳಾಗಿ, ಆ ನಂತರ ಅಕ್ಟೋಬರ್ 29 ರಂದು ಗೌಹಾತಿ ಹೈಕೋರ್ಟ್‍ನ ನ್ಯಾಯಮೂರ್ತಿ ಗಳಾಗಿ ನೇಮಕಗೊಂಡ ನ್ಯಾಯ ಮೂರ್ತಿ ಬೋಪಣ್ಣ ಸೇವಾ ಹಿರಿತನದ ಪಟ್ಟಿಯಲ್ಲಿ 36ನೇಯ ವರಾಗಿದ್ದಾರೆ. ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸರ ಹೆಸರುಗಳನ್ನೂ ಶಿಫಾರಸು ಮಾಡುವಾಗ ಅವರ ಅರ್ಹತೆ ಹಾಗೂ ಪ್ರಾಮಾಣಿಕತೆಯನ್ನಷ್ಟೇ ಅಲ್ಲದೆ ದೇಶದ ಎಲ್ಲಾ ಮುಖ್ಯ ನಾಯಾಧೀಶರ ಮತ್ತು ಹೈಕೋರ್ಟ್‍ನ ಎಲ್ಲಾ ನ್ಯಾಯ ಮೂರ್ತಿಗಳ ಸೇವಾ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕೊಲಿಜಿಯಂ ಏಪ್ರಿಲ್ 12 ರಂದು ಹೇಳಿಕೆ ನೀಡಿತ್ತು. ಸುಪ್ರೀಂ ಕೋರ್ಟ್‍ಗಳಿಗೆ ತಕ್ಕ ಪ್ರಾತಿನಿಧ್ಯತೆ ಯನ್ನು ನೀಡಲು ಅಪೇಕ್ಷಿಸಿದೆ ಎಂದು ಕೂಡ ಕೊಲಿಜಿಯಂ ಹೇಳಿತ್ತು.