ಮಡಿಕೇರಿ, ಮೇ 10: ಕ್ರೀಡಾ ಕ್ಷೇತ್ರದಲ್ಲಿ ಕೊಡಗಿನ ಯುವ ಜನತೆಯದ್ದು ಮೊದಲಿನಿಂದಲೇ ಮೇಲುಗೈ. ರಾಷ್ಟ್ರ ಮಟ್ಟದಲ್ಲಿ ಕೊಡಗಿನ ಅದೆಷ್ಟೋ ಕ್ರೀಡಾಪಟುಗಳು ಸಾಧನೆ ಮಾಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಅಂತಹದೇ ಒಬ್ಬ ಪ್ರತಿಭಾನ್ವಿತ ತರುಣ ಎಂ.ಎಸ್ ಪ್ರಜ್ವಲ್. ಇವರು ವಾಲಿಬಾಲ್ ಕ್ರೀಡೆಯಲ್ಲಿ ಸಾಧಕನಾಗಿ ಹೊರ ಹೊಮ್ಮುತ್ತಿದ್ದಾರೆ.
ಕಾವೇರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗವನ್ನು ಮಾಡುತ್ತಿರುವ ಎಂ.ಎಸ್ ಪ್ರಜ್ವಲ್, ಎಂ.ಎಂ. ಸತೀಶ್ ಹಾಗೂ ಎಂ.ಎಸ್. ವಿನಿತಾ ದಂಪತಿಗಳ ಪುತ್ರ. ಚಿರಿಯಪಂಡ ಸುಬ್ಬಯ್ಯ ಅವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪೊನ್ನಂಪೇಟೆಯ ಸ್ಕಿಪರ್ ತಂಡಕ್ಕೆ ವಾಲಿಬಾಲ್ ಪಟುವಾಗಿ ಆಡುತ್ತಿರುವ ಇವರು ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. 21 ವಯೋಮಾನದ ಕೆಳಗಿನ ಕಾವೇರಿಯನ್ಸ್ ಪರವಾಗಿ ಆಡಿ ವಿಜಯಶಾಲಿಯಾಗಿದ್ದಾರೆ. ಪ್ರಶಸ್ತಿಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಡುವ ಮಹದಾಸೆ, ಗುರಿಯನ್ನು ಹೊಂದಿದ್ದಾರೆ. ನಿರಂತರ ಪರಿಶ್ರಮ ವನ್ನು ಪಡುತ್ತಾ, ಕ್ರೀಡಾ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಉತ್ಸಾಹಿಯಾಗಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಕ್ರೀಡಾಪಟು ಎಂ.ಎಸ್. ಪ್ರಜ್ವಲ್ ಎಲೆ ಮರೆಯ ಕಾಯಿಯಂತೆ ಒಂದೊಂದೇ ಸಾಧನೆಗಳನ್ನು ಮಾಡುತ್ತಿರುವರು. ಇಂತವರಿಗೆ ಜಿಲ್ಲೆಯ ಜನತೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅವಶ್ಯಕತೆ ಇದೆ.
- ಶ್ರೀಧರ್ ನೆಲ್ಲಿತಾಯ