ಮಡಿಕೇರಿ, ಮೇ 10: ಕಳೆದ ಮಳೆಗಾಲದ ಭೀಕರ ಜಲಪ್ರಳಯದಲ್ಲಿ ಸಂಪಾಜೆ - ಊರುಬೈಲುವಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಕೊಚ್ಚಿಹೋಗಿದ್ದು, ಊರಿನ ನಿವಾಸಿಗಳು ತಾತ್ಕಾಲಿಕವಾಗಿ ಮಣ್ಣು ಮತ್ತು ಸಿಮೆಂಟ್ ಚೀಲಗಳನ್ನು ಬಳಸಿ ನಡೆದಾಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಇನ್ನೇನು ಮಳೆಗಾಲಕ್ಕೆ ಕೆಲವೇ ವಾರಗಳಿದ್ದು, ಸೇತುವೆಯ ಪುನರ್ ನಿರ್ಮಾಣ ಕಾರ್ಯ ಆರಂಭಗೊಳ್ಳದಿರುವದರಿಂದ ಇಲ್ಲಿನ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ರೊಚ್ಚಿಗೆದ್ದಿದ್ದಾರೆ. ಊರುಬೈಲು ಮತ್ತು ಸಂಪಾಜೆಗೆ ಸಂಪರ್ಕ ಕಲ್ಪಿಸುವ ಏಕೈಕ ಹಾದಿ ಇದಾಗಿದ್ದು, ಈ ಭಾಗದಿಂದ ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಸುಳ್ಯ ಶಾಲಾ - ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಈ ಆರೇಳು ಮೈಲಿ ಸುತ್ತು ಬಳಸಿ ಹೋಗುವಂತೆ ಪರಿಸ್ಥಿತಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಸತತ ನಾಲ್ಕು ತಿಂಗಳ ಕಾಲ ಪಯಸ್ವಿನಿ ತುಂಬಿ ಹರಿಯುವದರಿಂದ ವಿದ್ಯಾರ್ಥಿಗಳೂ ಸೇರಿದಂತೆ ಸ್ಥಳೀಯ ನಿವಾಸಿಗಳು ದುಪ್ಪಟ್ಟು ಹಣ ನೀಡಿ ಬಾಡಿಗೆ ವಾಹನಗಳನ್ನು ಆಶ್ರಯಿಸಬೇಕಾಗುತ್ತದೆ. ಆರ್ಥಿಕವಾಗಿ ಶಕ್ತರಲ್ಲದ ವಿದ್ಯಾರ್ಥಿಗಳ ಬದುಕು ದುಸ್ತರವಾಗುತ್ತದೆ. ಇಂತಹ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾದರೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.
ತುಂಬಿರುವ ಹೂಳು
ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಮಣ್ಣು ಮಿಶ್ರಿತ ಕೆಂಪುನೀರು, ಬೃಹತ್ ಗಾತ್ರದ ಮರ- ಗಿಡಗಳನ್ನು ತನ್ನೊಡಲಲ್ಲಿ ಹೊತ್ತು ಹರಿದ ನದಿಯಲ್ಲಿ ಆರೇಳು ಅಡಿಗಿಂತಲೂ ಹೆಚ್ಚು ಹೂಳು ತುಂಬಿಕೊಂಡಿದ್ದು, ಭಾರೀ ಗಾತ್ರದ ಹೊಂಡಗಳು ಮುಚ್ಚಿಹೋಗಿ ನದಿಯಲ್ಲಿ ನೀರಿನ ಶೇಖರಣೆ ಇಲ್ಲದೆಯೇ ಸಮತಟ್ಟಾಗಿ ಹರಿಯುತ್ತಿದೆ. ನದಿ - ನದಿ ತೀರಗಳು ಮರಳಿನಿಂದಾವೃತವಾದ ಮರುಭೂಮಿಯಂತಾಗಿದ್ದು, ಈ ಭಾರೀ ಪ್ರಮಾಣದ ಮರಳು ಮತ್ತು ಹೂಳನ್ನು ಸೂಕ್ತ ವಿಲೇವಾರಿ ಮಾಡಿ ನದಿಪಾತ್ರವನ್ನು ಅಗಲೀಕರಣ ಮಾಡದಿದ್ದರೆ ಮುಂದೆಯೂ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು ತೀರ ಪ್ರದೇಶಗಳಿಗೆ ಹಾನಿಯುಂಟಾಗುವದರಿಂದ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮದೆನಾಡು-ಮಡಿಕೇರಿಯಲ್ಲಿ ಮಳೆ ಬಂದರೂ ಇಲ್ಲಿ ಪಯಸ್ವಿನಿ ಕೆಂಬಣ್ಣವಾಗಿ ಹರಿಯುತ್ತದೆ. ಈಗ ನದಿಯಲ್ಲಿಯೇ ಹೊಂಡಗಳನ್ನು ತೆಗೆದು ಪಂಪಿನ ಮೂಲಕ ನೀರು ಹಾಯಿಸುತ್ತಿರುವ ಸಂಪಾಜೆ, ಚೆಂಬು, ಊರುಬೈಲುವಿನ ಕೃಷಿಕರು ಆಗಾಗ್ಗೆ ಮುಚ್ಚಿಹೋಗುತ್ತಿರುವ ತೋಡಿದ ಹೊಂಡ ಮತ್ತು ಮರಳು ಸೇರಿ ಹಾಳಾಗುತ್ತಿರುವ ಪಂಪ್ಸೆಟ್ಗಳ ಬಗ್ಗೆ ದಿಕ್ಕೆಟ್ಟಿದ್ದಾರೆ. ಪಯಸ್ವಿನಿಯನ್ನೇ ಕೃಷಿಗಾಗಿ ಅವಲಂಬಿಸಿರುವ ಕೃಷಿಕರ ಸಂಕಷ್ಟಕ್ಕೆ ಸಂಬಂಧಪಟ್ಟವರು ಕಿವಿಯಾಗಬೇಕಿದೆ.
- ಮೋಕ್ಷಿತ್ ಪಟೇಲ್