ವೀರಾಜಪೇಟೆ, ಮೇ 9: ವೀರಾಜಪೇಟೆಯ ತೆಲುಗರಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದ ವತಿಯಿಂದ ವರ್ಷಂಪ್ರತಿ ಆಚರಿಸುವ ಕರಗ ಮಹೋತ್ಸವಕ್ಕೆ ನಿನ್ನೆ ರಾತ್ರಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಮಹೋತ್ಸವದ ಅಂಗವಾಗಿ ಇಲ್ಲಿನ ಮುಖ್ಯಬೀದಿಗಳಲ್ಲಿ ಕರಗದ ಆರಾಧನಾ ಉತ್ಸವ ಜರುಗಿತು. ಕರಗದ ಮೆರವಣಿಗೆ ಸಂದರ್ಭದಲ್ಲಿ ಮುತ್ತೈದೆಯರು, ಮಕ್ಕಳು ಸೇರಿದಂತೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಇಲ್ಲಿನ ಗೌರಿಕೆರೆಯಲ್ಲಿ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಾದ್ಯಗೋಷ್ಠಿಯೊಂದಿಗೆ ಮುಖ್ಯ ರಸ್ತೆಯ ಮಾರ್ಗವಾಗಿ ಗಡಿಯಾರಕಂಬ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಜೈನರ ಬೀದಿ, ತೆಲುಗರ ಬೀದಿ ಮಾರ್ಗವಾಗಿ ರಾತ್ರಿ 11.30ಗಂಟೆಗೆ ಮಾರಿಯಮ್ಮ ದೇವಾಲಯಕ್ಕೆ ತಲಪಿ ಪೂಜೆ ಸಲ್ಲಿಸಲಾಯಿತು. ಮಾರಿಯಮ್ಮ ಕರಗ ಮಹೋತ್ಸವದ ಅಂಗವಾಗಿ ತಾ. 8ರಂದು ರಾತ್ರಿ 7ಗಂಟೆಗೆ ಮುಖ್ಯ ಬೀದಿಗಳಲ್ಲಿ ನಂದಾದೀವಿಗೆ ಹಾಗೂ ತಂಬಿಟ್ಟು ಆರತಿ ಮೆರವಣಿಗೆ ನಡೆಯಿತು. ತಾ. 9ರಂದು ಅಪರಾಹ್ನ 12.30ಗಂಟೆಗೆ ದೇವಾಲಯದಲ್ಲಿ ಮಾರಿಯಮ್ಮ ಮಹಾಪೂಜಾ ಸೇವೆ ಜರುಗಲಿದೆ. ತಾ. 11ರಂದು ರಾತ್ರಿ 7ಗಂಟೆಗೆ ಮುಖ್ಯಬೀದಿಗಳಲ್ಲಿ ಕರಗ ಮೆರವಣಿಗೆ ನಡೆದು ರಾತ್ರಿ ಮಹಾಪೂಜಾ ಸೇವೆಯ ನಂತರ ಮಹೋತ್ಸವಕ್ಕೆ ತೆರೆ ಬೀಳಲಿದೆ.