ವೀರಾಜಪೇಟೆ, ಮೇ 9: ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಅಬಲೆಯ ಮೇಲೆ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿಕೊಂಡು ಗುಡಿಸಲು ನಿರ್ಣಾಮ ಮಾಡಿದ ಘಟನೆ ನಗರದ ಹೊರವಲಯದ ತರ್ಮೇಕಾಡು ಪೈಸಾರಿಯಲ್ಲಿ ನಡೆದಿದೆ.

ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೆ ಸಂಖ್ಯೆ 315/1ಪಿ1 ರಲ್ಲಿ ತರ್ಮೇಕಾಡು ಪೈಸಾರಿಯ ನಿವಾಸಿ ದಿವಂಗತ ಬಾಬು ಡಿಸೋಜಾ ಎಂಬವರ ಪತ್ನಿ ಮಿನಿ ಡಿಸೋಜಾ ಮತ್ತು ಇಬ್ಬರು ಮಕ್ಕಳಾದ ಸ್ನೇಹ 18 ಮತ್ತು ಸನಾಲ್ 19 ವಾಸವಾಗಿದ್ದಾರೆ. ಮಿನಿ ಅವರ ಪತಿ ಕೂಲಿ ಕಾರ್ಮಿಕರಾಗಿದ್ದ ಬಾಬು ಬೂದಿಮಾಳದ ತೋಟೊಂದರಲ್ಲಿ ಮರದ ಕೊಂಬೆಗಳನ್ನು ಬೇರ್ಪಡಿಸುವ ಸಂದರ್ಭ ಬಿದ್ದು ಮರಣ ಹೊಂದಿದ್ದರು. ದಿಕ್ಕು ತೋಚದೆ ಎರಡು ಮಕ್ಕಳೊಂದಿಗೆ ತರ್ಮೆಕಾಡು ಪೈಸಾರಿಯಲ್ಲಿ ಕಳೆದ 06 ವರ್ಷಗಳ ಹಿಂದೆ ಮರದ ಕಟ್ಟಿಗೆಗಳಿಂದ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮನೆಯ ನಿರ್ವಹಣೆಗೆ ಕೊಲಿ ಕೆಲಸಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವ ಸಂದÀರ್ಭದಲ್ಲಿ ವೀರಾಜಪೇಟೆ ವಲಯ ಕಂದಾಯ ಅಧಿಕಾರಿಗಳು ಏಕಾಏಕಿಯಾಗಿ ಗುಡಿಸಲು ಮೇಲಿನ ಹೊದಿಕೆಯನ್ನು ಮತ್ತು ಇನ್ನಿತರ ವಸ್ತುಗಳನ್ನು ಎಳೆದು ಹಾಕಿದರು ಮಿನಿ ಅವರು ಕಾರಣ ಕೇಳಿದಾಗ ನ್ಯಾಯಾಲಯದಲ್ಲಿ ದಾವೆ ಇರುವದರಿಂದ ಗುಡಿಸಲು ನಿರ್ಮಾಣಕ್ಕೆ ಅನುಮತಿ ಇಲ್ಲ; ನ್ಯಾಯಾಲಯದ ಅದೇಶವನ್ನು ಉಲ್ಲಂಘನೆ ಮಾಡಿದಂತೆ ಆದುದರಿಂದ ತಾವುಗಳು ಸ್ಥಳ ಬಿಟ್ಟು ತೆರಳಬೇಕು ಎಂದು ಹೇಳಿರುತ್ತಾರೆ.

ಮಿನಿ ಡಿಸೋಜ 21-10-2015 ರಲ್ಲಿ ರೂ 65 ರಂತೆ; ಅನಧಿಕೃತ ನಿರ್ಮಾಣದ ಕ್ರಮಬದ್ದಗೊಳಿಸುವಿಕೆಗಾಗಿ ಅರ್ಜಿಯನ್ನು ಸಲ್ಲಿಸಿದ್ದು ತಾಲೂಕು ಕಚೇರಿಯಿಂದ ಸ್ವೀಕೃತಿ ಪತ್ರ ಪಡೆದುಕೊಂಡಿದ್ದಾರೆ. ಅಲ್ಲದೆ ನಮೂನೆ 57 ರಲ್ಲಿ ಅತಿಕ್ರಮಿಸಿರುವ ಜಮೀನಿನ ಸಕ್ರಮಕ್ಕಾಗಿ 0.15 ಸೆಂಟು ಸ್ಥಳ ಮನೆ ನಿರ್ಮಾಣಕ್ಕೆ ಅರ್ಜಿಯನ್ನು ತಾ. 01-01-2019 ರಂದು ಸಲ್ಲಿಸಿದ್ದಾರೆ. ತಾಲೂಕು ಕಚೇರಿಯು ಇವರಿಗೆ ನೋಂದಾಣಿ ಸಂಖ್ಯೆ 458/1-1-2019 ರಲ್ಲಿ ಸ್ವೀಕೃತಿ ಪತ್ರ ನೀಡಿರುತ್ತದೆ. ಮುಂದಿನ ಮಳೆಗೆ ಗುಡಿಸಲ ಮೇಲೆ ಹೊದಿಸಿರುವ ಪ್ಲಾಸ್ಟಿಕ್ ಹೊದಿಕೆಯು ಹಾಳಾಗಿರುವದರಿಂದ ಹೊಸ ಪ್ಲಾಸ್ಟಿಕ್ ಹೊದಿಕೆ ತಂದು ಹಾಕುತ್ತಿದ್ದರು ಇದನ್ನು ಗಮನಿಸಿದ ಇಲಾಖೆಯ ಅಧಿಕಾರಿಗಳು ಹೊಸ ಮನೆ ನಿರ್ಮಾಣವೆಂದು ಅಪಾರ್ಥ ಮಾಡಿಕೊಂಡು ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ತಾ. 4 ರಂದು ಈ ಕುಟುಂಬ ಮತ್ತು ಸ್ಥಳೀಯರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದು, ಅರ್ಜಿಯನ್ನು ಸಲ್ಲಿಸಲಾಗಿದೆ ಅರ್ಜಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಮೌಖಿಕವಾಗಿ ನಿಮ್ಮ ಸ್ಥಳಕ್ಕೆ ತೆರಳಿ ಮುಂದೆ ತಹಶೀಲ್ದಾರ್ ಮತ್ತು ಕಂದಾಯಾಧಿಕಾರಿಗಳೊಡನೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಮಿನಿ ಅವರು ಪತ್ರಿಕೆಯೊಂದಿಗೆ ಹೇಳಿದರು. -ಕಿಶೋರ್ ಶೆಟ್ಟಿ