ಸಿದ್ದಾಪುರ, ಮೇ 9: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ, ಉಪಯೋಗ ಶೂನ್ಯವಾಗಿ ಪಾಳುಬಿದ್ದಿದೆ.

ಅಮ್ಮತ್ತಿ-ಕಣ್ಣಂಗಾಲ ರಸ್ತೆಯಲ್ಲಿ ಈ ಹಿಂದೆ ಕಿರಿದಾದ ಸೇತುವೆ ಇದ್ದು, ವಾಹನದಟ್ಟಣೆ, ಅಪಘಾತವನ್ನು ಅರಿತು 80 ಲಕ್ಷ ರೂ ವೆಚ್ಚದಲ್ಲಿ ನೂತನ ಸೇತುವೆ ಕೈಗೆತ್ತಿಕೊಳ್ಳಲಾಗಿತ್ತು.

ಕಿರಿದಾದ ಸೇತುವೆಯಲ್ಲಿ ಬಸ್ ಸೇರಿದಂತೆ ವಾಹನಗಳಿಗೆ ಸಂಚರಿಸಲು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ನಬಾರ್ಡ್ ಯೋಜನೆಯಡಿ ಸೇತುವೆ ನಿರ್ಮಿಸಲು 2015 ರಲ್ಲಿ 80 ಲಕ್ಷ ರೂ ಮಂಜೂರು ಮಾಡಲಾಯಿತು.

ಬಳಿಕ ಮೈಸೂರಿನ ಗುತ್ತಿಗೆದಾರರೋರ್ವರು ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಅಂದಾಜು 15 ಅಡಿ ಅಗಲದ ಸೇತುವೆಯನ್ನು 2017 ರ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಿಸಿದರು. ಸೇತುವೆ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ಕಳೆದರೂ ಈವರೆಗೂ ಗ್ರಾಮಸ್ಥರಿಗೆ ಯಾವದೇ ಪ್ರಯೋಜನವಾಗಲಿಲ್ಲ. ಕಾರಣ ಸೇತುವೆಗೆ ತೆರಳಲು ನಿರ್ಮಾಣವಾಗಬೇಕಿದ್ದ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಗ್ರಾಮಸ್ಥರು ಹಾಗೂ ವಾಹನ ಚಾಲಕರು ಹಳೆಯ ಸೇತುವೆಯನ್ನೇ ಅವಲಂಭಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಹಳೆಯ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ತೀರಾ ಕಿರಿದಾಗಿದೆ. ಒಂದು ವಾಹನ ಬಂದರೆ ಮುಂಬದಿ ವಾಹನವನ್ನು ನಿಲ್ಲಿಸಿ ದಾರಿ ಬಿಟ್ಟುಕೊಡಬೇಕು. ಮಾತ್ರವಲ್ಲದೆ ಸೇತುವೆಯು ರಸ್ತೆಯ ತಿರುವಿನಲ್ಲಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ರೂ. 80 ಲಕ್ಷ ಹಣ ವ್ಯಯಿಸಿ ಸೇತುವೆ ನಿರ್ಮಾಣವಾಗಿದ್ದರೂ ರಸ್ತೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ಅಮ್ಮತ್ತಿ-ಒಂಟಿಯಂಗಡಿಗೆ ತೆರಳುವ ರಸ್ತೆಯ ಕೊಮ್ಮೆತೋಡು ಸೇತುವೆ ಹಲವಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಇದೀಗ ಸೇತುವೆಯ ಕೆಳಭಾಗದಲ್ಲಿ ಬಿರುಕು ಉಂಟಾಗಿದೆ. ಸೇತುವೆಯು ಕಿರಿದಾಗಿದ್ದು, ಮೇಲಿನ ಭಾಗದಲ್ಲಿಯೂ ಬಿರುಕುಗಳಿಂದ ಕೂಡಿದೆ.

ನೂತನ ಸೇತುವೆಗೆ ರಸ್ತೆ ನಿರ್ಮಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಸಹಾಯಕ ಇಂಜಿನಿಯರ್ ಯನೇಶ್ ಭರವಸೆ ನೀಡಿದ್ದಾರೆ.

- ಎ.ಎನ್. ವಾಸು