ಗೋಣಿಕೊಪ್ಪ ವರದಿ, ಮೇ 9: ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಜೊತೆಯಲ್ಲಿ ಕೌಶಲ್ಯ ವೃದ್ಧಿಗೆ ನೆರವಾಗಲು ಸುವರ್ಣ ಕಾವೇರಿ ಉದ್ಯೋಗ ಭರವಸೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಅಜ್ಜಿನಿಕಂಡ ಗಣಪತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಟೀಚ್ ಟು ಫಿಶ್ ಟ್ರಸ್ಟ್ ಸಹಕಾರದಲ್ಲಿ ಕೊಲ್ಕತ್ತ ಮೂಲದ ಒರೈನ್ ಎಜುಟೆಕ್ ಸಂಸ್ಥೆ ಸಹಯೋಗದೊಂದಿಗೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಕಾವೇರಿ ಎಜುಕೇಶನ್ ಸೊಸೈಟಿ ಅಧೀನದಲ್ಲಿ ಬರುವ ಗೋಣಿಕೊಪ್ಪಲು ಹಾಗೂ ವೀರಾಜಪೇಟೆ ಪದವಿ ಕಾಲೇಜುಗಳ ಪದವಿ ಹಂತದ ವಿದ್ಯಾರ್ಥಿಗಳು ಯೋಜನೆಯ ಉಪಯೋಗವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಟೀಚ್ ಟು ಫಿಶ್ ಸಂಸ್ಥೆ ಟ್ರಸ್ಟಿ ಮಣವಟ್ಟೀರ ಬೋಪಣ್ಣ ಮಾತನಾಡಿ ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಆತಿಥ್ಯ, ರೀಟೇಲ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಮಾರ್ಗ ದರ್ಶನ ಸಿಗಲಿದೆ. ವಿದ್ಯಾರ್ಥಿಗೆ 300 ಗಂಟೆಗಳ ಕೌಶಲ್ಯ ತರಬೇತಿಯನ್ನು ಒರೈನ್ ಎಜುಟೆಕ್ ಸಂಸ್ಥೆಯ ನುರಿತ ಶಿಕ್ಷಕರು ನೀಡಲಿದ್ದಾರೆ ಎಂದು ಹೇಳಿದರು.

ಒರೈನ್ ಎಜುಟೆಕ್ ಕ್ಲಸ್ಟರ್ ವ್ಯವಸ್ಥಾಪಕ ಸ್ವರೂಪ್ ಮೊಂಡಲ್ ಮಾತನಾಡಿ, ಒರೈನ್ ಎಜುಟೆಕ್ ದೇಶದ ವಿವಿಧ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ ಎಂದರು. ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲೆ ಎಸ್.ಆರ್. ಉಷಾಲತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಜನೆ ಉತ್ತಮ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಟೀಚ್ ಟು ಫಿಶ್ ಸಂಸ್ಥೆ ಟ್ರಸ್ಟಿ ಸರತ್ ನರು, ಮೀನಾ ಬಿದ್ದಪ್ಪ, ಪಿ.ಡಿ. ಗಣಪತಿ, ಕಾವೇರಿ ಎಜುಕೇಶನ್ ಸೊಸೈಟಿ ಆಡಳಿತಾಧಿಕಾರಿ ಎಂ.ಕೆ. ಮೊಣ್ಣಪ್ಪ, ಕಾಲೇಜು ಪ್ರಾಂಶುಪಾಲೆ ಇಟ್ಟೀರ ಕಮಲಾಕ್ಷಿ ಹಾಗೂ ಒರೈನ್ ಎಜುಟೆಕ್ ಪ್ರಾಂತೀಯ ವ್ಯವಸ್ಥಾಪಕ ಕ್ರಾಂತಿ ಕುಮಾರ್ ಇದ್ದರು.