ಕಾಕೋಟುಪರಂಬು (ವೀರಾಜಪೇಟೆ), ಮೇ 8: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಪಂದ್ಯದಲ್ಲಿ ಪುದಿಯೊಕ್ಕಡ- ಕಾಳೇಂಗಡ, ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಪರದಂಡ-ಮಂಡೇಪಂಡ ಕುಟುಂಬಗಳು ಫೈನಲ್ಸ್ ಪ್ರವೇಶಿಸಿವೆ. ಫೈನಲ್ ಪಂದ್ಯಾಟವು ತಾ. 10ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.ನಾಕೌಟ್ ಪಂದ್ಯದಲ್ಲಿ ಕಾಳೇಂಗಡ ತಂಡ ಇಟ್ಟಿರ ತಂಡವನ್ನು 5-3 ಗೋಲುಗಳಿಂದ ಪೆನಾಲ್ಟಿ ಶೂಟೌಟ್ ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು 2-2 ಗೋಲಿನ ಸಮಬಲ ಸಾಧಿಸಿತು. ಕಾಳೇಂಗಡ ಸೌತ್ ಸೆಂಟರ್ ಆಟಗಾರ ಚಂಗಪ್ಪ 2 (31, ಪೆನಾಲ್ಟಿ ಸ್ಟ್ರೋಕ್ 40ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ಬೋಪಣ್ಣ, ಯಶಸ್ವಿನಿ, ಮೋನಿಷಾ, ಇಟ್ಟಿರ ಪರ ಅಚ್ಚಪ್ಪ (44ನಿ), ಕುಟ್ಟಪ್ಪ (48ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ರೋಹನ್ ಗೋಲು ದಾಖಲಿಸಿದರು. 40ನೇ ನಿಮಿಷದಲ್ಲಿ ಇಟ್ಟಿರ ತಂಡ ಡಿ ಆವರಣದಲ್ಲಿ
(ಮೊದಲ ಪುಟದಿಂದ) ಮಾಡಿದ ತಪ್ಪಿಗೆ ತೀರ್ಪುಗಾರ ಮೂಕಚಂಡ ಅಪ್ಪಣ್ಣ ಕಾಳೇಂಗಡ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್ ನೀಡಿದರು. ಕಾಳೇಂಗಡ ತಂಡದಲ್ಲಿ ಮೋನಿಷಾ ಹಾಗೂ ಯಶಸ್ವಿನಿ ಸಹೋದರಿಯರು ಎಲ್ಲರ ಗಮನ ಸೆಳೆದರು.
ಪುದಿಯೊಕ್ಕಡ ತಂಡವು 3-1 ಗೋಲುಗಳಿಂದ ಚಂದುರ ತಂಡವನ್ನು ಪರಾಭವಗೊಳಿಸಿತು. ಪುದಿಯೊಕ್ಕಡ ಪರ ಸುಮನ್ ಪೊನ್ನಪ್ಪ (1ನಿ), ಪೆಮ್ಮಯ್ಯ (8ನಿ), ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ (53ನಿ)ದಲ್ಲಿ ಗೋಲು ದಾಖಲಿಸಿದರೆ ಚಂದುರ ಪರ ಇಂಡಿಯನ್ ಕ್ಯಾಂಪರ್ ಪೂವಣ್ಣ (13ನಿ) ಬಾರಿಸಿದ ಏಕೈಕ ಗೋಲಿಗೆ ತೃಪ್ತಿಪಡಬೇಕಾಯಿತು. ಚಂದುರ ತಂಡಕ್ಕೆ ಗೋಲುಗಳಿಸಲು ವಿಫುಲ ಅವಕಾಶಗಳಿದ್ದರೂ ಡಿ ಆವರಣದಲ್ಲಿ ಮಾಡಿಕೊಂಡ ತಪ್ಪುಗಳಿಂದಾಗಿ ಸೋಲಿಗೆ ಶರಣಾಗಬೇಕಾಯಿತು. ಚಂದುರ ತಂಡದ ಆಟಗಾರ 53ನೇ ನಿಮಿಷದದಲ್ಲಿ ಡಿ ಆವರಣದಲ್ಲಿ ಮಾಡಿದ ತಪ್ಪಿಗೆ ಪುದಿಯೊಕ್ಕಡ ತಂಡಕ್ಕೆ ತೀರ್ಪುಗಾರ ಕೊಕ್ಕಂಡ ರೋಷನ್ ಪೆನಾಲ್ಟಿಸ್ಟ್ರೋಕ್ ನೀಡಿದರು. ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ ಗೋಲಾಗಿ ಪರಿವರ್ತಿಸಿದರು.
ಚಾಂಪಿಯನ್ಸ್ ಲೀಗ್ ಸೆಮಿಫೈನಲ್ಸ್‍ನಲ್ಲಿ ಮಂಡೇಪಂಡ ತಂಡವು ಚೇಂದಂಡ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಆರಂಭದಿಂದಲೇ ಸಂಘಟಿತ ಹೋರಾಟಕ್ಕೆ ಒತ್ತು ನೀಡಿದ ಮಂಡೇಪಂಡ ಪರ ಕವನ್ (18ನಿ), ಸಜನ್ ¸ಅಚ್ಚಯ್ಯ (34ನಿ), ಚಂಗಪ್ಪ (58ನಿ)ದಲ್ಲಿ ಗೋಲು ಬಾರಿಸಿ ಗೆಲವಿನ ನಗೆ ಬೀರಿದರು. ಚೇಂದಂಡ ತಂಡದ ಪರ ಒಲಂಪಿಯನ್ ನಿಕಿನ್ ತಿಮ್ಮಯ್ಯ ಸೇರಿದಂತೆ ಬಹುತೇಕರು ಸಾಯಿ ಆಟಗಾರರಾಗಿದ್ದರೂ ಕೂಡ ಗೆಲವಿನ ದಡ ಸೇರಲು ಸಾಧ್ಯವಾಗಿಲ್ಲ. ಸಾಯಿ ಆಟಗಾರ ಮೋಕ್ಷಿತ್ (26,545) ನಿಮಿಷದಲ್ಲಿ ಗೋಲು ದಾಖಲಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.
ಪರದಂಡ ತಂಡವು 5-2 ಗೋಲುಗಳಿಂದ ಪಳಂಗಂಡ ತಂಡವನ್ನು ಪರಾಭವಗೊಳಿಸಿತು. ಪರದಂಡ ಪರ ಪ್ರಜ್ವಲ್ (10,55ನಿ), ದೀರಜ್ ಮುತ್ತಣ್ಣ (25ನಿ), ಕುಶಾಲಪ್ಪ (34ನಿ), ಕೀರ್ತಿ ಮೊಣ್ಣಪ್ಪ (59ನಿ) ಗೋಲು ದಾಖಲಿಸಿ ಸುಲಭ ಜಯ ಕಂಡುಕೊಂಡರು. ಪಳಂಗಂಡ ಪರ ಅಜಯ್ ಅಯ್ಯಪ್ಪ (32ನಿ), ಪೊನ್ನಪ್ಪ (44ನಿ) ಗೋಲು ಬಾರಿಸಿದರು. ಪಳಂಗಂಡ ತಂಡ ಡಿ ಆವರಣದಲ್ಲಿ ಮಾಡಿದ ತಪ್ಪಿಗೆ ಪರದಂಡ ತಂಡಕ್ಕೆ ತೀರ್ಪುಗಾರ ಚಂದಪಂಡ ಆಕಾಶ್ ಪೆನಾಲ್ಟಿಸ್ಟ್ರೋಕ್ ನೀಡಿದರು. ಪಳಗಂಡ ಮುತ್ತಣ್ಣ ಸ್ಟ್ರೋಕ್‍ನ್ನು ಹೊರಗೆ ತಳ್ಳಿದರು.
ಅಂತರಾಷ್ಟ್ರೀಯ ನಿಯಮಗಳ ಅಡಿಯಲ್ಲಿ ನಡೆದ ಪಂದ್ಯದಲ್ಲಿ ತೀರ್ಪುಗಾರರಾಗಿ ಅಂತರಾಷ್ಟ್ರೀಯ ತೀರ್ಪುಗಾರ ಕೊಂಡಿರ ಕೀರ್ತಿ ಮುತ್ತಪ್ಪ, ರಾಷ್ಟ್ರೀಯ ತೀರ್ಪುಗಾರ ಮೂಕಚಂಡ ನಾಚಪ್ಪ, ಕುಮ್ಮಂಡ ಬೋಸ್‍ಚಂಗಪ್ಪ, ಚಂದಪಂಡ ಆಕಾಶ್, ಕೋಡಿಮಣಿಯಂಡ ಗಣಪತಿ, ಬೊಳ್ಳಚಂಡ ನಾಣಯ್ಯ, ಅಣ್ಣಡಿಯಂಡ ಪೊನ್ನಣ್ಣ ಕಾರ್ಯ ನಿರ್ವಹಿಸಿದರು.