ಮಡಿಕೇರಿ, ಮೇ 8: ಕಳೆದ ಸಾಲಿನ ಮುಂಗಾರುವಿನಲ್ಲಿ ಕೊಡಗು ಪ್ರಾಕೃತಿಕ ವಿಕೋಪದಿಂದ ಸಂಕಷ್ಟ ಎದುರಿಸಿದ್ದ ಹಿನ್ನೆಲೆಯನ್ನು ಪ್ರಸಕ್ತ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಪೂರ್ವಭಾವಿ ಸಭೆಯನ್ನು ನಡೆಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.ಅಲ್ಲದೆ ಈ ಮೂರು ತಿಂಗಳು ಯಾರೊಬ್ಬರು ರಜೆಯಲ್ಲಿ ತೆರಳದಂತೆ ಮತ್ತು ಆಯಾ ಇಲಾಖೆಗಳ ಅಧಿಕಾರಿಗಳು ನಿತ್ಯವೂ ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು, ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಡಕ್ ಸೂಚನೆ ನೀಡಿದ್ದಾರೆ. ಅನಿವಾರ್ಯ ಸಂದರ್ಭ ಮೇಲಧಿಕಾರಿಗಳ ಅಪ್ಪಣೆಯೊಂದಿಗೆ ಪೂರ್ವಾನುಮತಿ ಪಡೆದುಕೊಂಡು ರಜೆ ಪಡೆಯುವಂತೆ ಕಿವಿಮಾತು ಹೇಳಿದ್ದಾರೆ.

ಪ್ರಸಕ್ತ ಮುಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಸಂಭವಿಸಬಹುದಾದ ಭೂಕುಸಿತ ಹಾಗೂ ಪ್ರವಾಹ ಎದುರಿಸಲು ಈಗಿನಿಂದಲೇ ಅಗತ್ಯ ತಯಾರಿ

(ಮೊದಲ ಪುಟದಿಂದ) ಮಾಡಿಕೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಹಾಗೂ ಸೂಕ್ಷ್ಮ ಪ್ರದೇಶಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದು, ತಮಗೆ ವಹಿಸಿರುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋಡಲ್ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

‘ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವದರಿಂದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಜೂನ್ 1 ರಿಂದ ಆಗಸ್ಟ್ 31 ರವರೆಗೆ ರಜೆ ಪಡೆಯುವಂತಿಲ್ಲ, ಈ ಮೂರು ತಿಂಗಳಲ್ಲಿ ಸಮಸ್ಯೆಗಳಿದ್ದಲ್ಲಿ, ತುರ್ತು ಸಂದರ್ಭದಲ್ಲಿ ಮಾತ್ರ ಕೇಂದ್ರ ಸ್ಥಾನದಿಂದ ಅನುಮತಿ ಪಡೆದು ಹೊರಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.’

ಪ್ರಕೃತಿ ವಿಕೋಪ ಎದುರಿಸುವ ಸಂಬಂಧ ಸೂಕ್ಷ್ಮ ಪ್ರದೇಶಗಳ 32 ಗ್ರಾ.ಪಂ.ವ್ಯಾಪ್ತಿಗೆ ನಿಯೋಜಿಸಿರುವ ನೋಡೆಲ್ ಅಧಿಕಾರಿಗಳು ತಮ್ಮ ಗ್ರಾ.ಪಂ.ವ್ಯಾಪ್ತಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅಧ್ಯಯನ ಮಾಡಿ ಒಂದು ವಾರದೊಳಗೆ ವರದಿ ನೀಡಬೇಕು. ಹಾಗೆಯೇ ಉಪ ಸಮಿತಿಯು ತಮ್ಮ ಹಂತದಲ್ಲಿ ಸಭೆ ನಡೆಸಿ ಸಭಾ ನಡಾವಳಿಯ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನೋಡಲ್ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಪಿಡಿಒ, ಗ್ರಾಮ ಲೆಕ್ಕಿಗರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಮುದಾಯ ಪ್ರತಿನಿಧಿಗಳ ತಂಡ ರಚಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು. ನಗರ, ಪಟ್ಟಣ, ಗ್ರಾ.ಪಂ.ಮಟ್ಟದಲ್ಲಿ ಚರಂಡಿ ಸ್ವಚ್ಛಗೊಳಿಸುವದು, 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವದು, ಜಾನುವಾರುಗಳ ರಕ್ಷಣೆ, ಮನೆಗಳ ಪರಿಸ್ಥಿತಿ ಮತ್ತಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಒದಗಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಟಾಸ್ಕ್‍ಫೋರ್ಸ್ ರಚನೆ

ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗಳು ಪ್ರತ್ಯೇಕವಾಗಿ ಟಾಸ್ಕ್‍ಫೋರ್ಸ್ ರಚನೆ ಮಾಡಬೇಕು. ತಮ್ಮ ಹಂತದಲ್ಲಿ ಅಗತ್ಯ ಜೆಸಿಬಿ, ಜೀಪುಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಹಾಗೂ ಸೇತುವೆ ಬದಿ ಬೀಳುವ ಮರಗಳನ್ನು ತೆರವುಗೊಳಿಸಬೇಕು. ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಮಕ್ಕಳ ರಕ್ಷಣೆಗೆ ಗಮನಹರಿಸಬೇಕು. ಪರಿಹಾರ ಕೇಂದ್ರಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ವೈದ್ಯರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಅಗ್ನಿ ಶಾಮಕ, ಗೃಹ ರಕ್ಷಕ ದಳ ವಿಭಾಗಕ್ಕೆ ಅವಶ್ಯಕವಾಗಿ ಬೇಕಿರುವ ಸಾಮಗ್ರಿ-ಸಲಕರಣೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರು ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುವ ಬಗ್ಗೆ ಹಲವು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಂತೇಶಪ್ಪ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಯುನಿಸೆಫ್ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ಪ್ರಭಾತ್, ಅಗ್ನಿಶಾಮಕ ಇಲಾಖೆ ಅಧಿಕಾರಿ ಚೇತನ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಇದ್ದರು.