(ವಿಶೇಷ ವರದಿ: ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮೇ 8: ಗಿರಿಜನರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುವದರೊಂದಿಗೆ ಇವರ ಬದುಕಿಗೆ ಆಸರೆಯಾಗುತ್ತಿದ್ದರೆ; ಅರಣ್ಯ ಇಲಾಖೆಯು ಗಿರಿಜನರ ಬದುಕಿಗೆ ಸಂಚಕಾರ ತಂದೊಡ್ಡು ತ್ತಿರುವದು ಇಲ್ಲಿನ ಆಡಳಿತಕ್ಕೆ ಸಾಕ್ಷಿಯಾಗಿದೆ. ಅರಣ್ಯ ಇಲಾಖೆಯು ಸದ್ದುಗದ್ದಲವಿಲ್ಲದೆ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳು ಅರಣ್ಯ ಪ್ರದೇಶವೆಂದು ಸರ್ವೆ ಕಾರ್ಯಕ್ಕೆ ಮುಂದಾಗಿದ್ದು, ಅಲ್ಲಲ್ಲಿ ಹದ್ದುಬಸ್ತು ಕಲ್ಲುಗಳನ್ನು ನೆಡುವದರೊಂದಿಗೆ 15ಕ್ಕೂ ಹೆಚ್ಚು ಬೆಟ್ಟ ಕುರುಬ ಗಿರಿಜನರ ಕುಟುಂಬಗಳು ಕಂಗಾಲಾಗಿದ್ದಾರೆ.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಕಾಟೀಗುಂಡಿ ಕಾಲೋನಿಯಲ್ಲಿ ಕಳೆದ 40 ವರ್ಷಗಳಿಂದ 15 ಬೆಟ್ಟ ಕುರುಬ ಗಿರಿಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಬಿ.ಶೆಟ್ಟಿಗೇರಿಯ ಪಂಚಾಯ್ತಿಯು ಇವರಿಗೆ ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ವಿದ್ಯುತ್‍ಚ್ಛಕ್ತಿ, ಮನೆ ನಿರ್ಮಾಣ ಸೇರಿದಂತೆ ಅಂಗನವಾಡಿ ಕೇಂದ್ರ, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿಕೊಟ್ಟಿದೆ.

ಕಾಲೋನಿಯಲ್ಲಿ ವಾಸಿಸುವ ಬೆಟ್ಟ ಕುರುಬ ಜನಾಂಗ ತಮ್ಮ ತಮ್ಮ ಮೂರು ಎಕರೆಗೂ ಅಧಿಕ ಜಾಗದಲ್ಲಿ ಕಾಫಿ, ಕರಿಮೆಣಸು, ಇತ್ಯಾದಿ ಗಿಡಗಳನ್ನು ಬೆಳೆಸಿಕೊಂಡು ಬದುಕು ಸಾಗಿಸುತ್ತಿದ್ದರು. ಇದೀಗ ಈ ಜಾಗದ ಮೇಲೆ ಅರಣ್ಯ ಇಲಾಖೆಯ ವಕ್ರ ದೃಷ್ಠಿ ಬೀರಿದೆ. ಈ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು ನಿಮ್ಮನ್ನು ಮುಂದೆ ಸ್ಥಳಾಂತರ ಮಾಡಲಾಗು ವದು ಎಂಬ ಸೂಚನೆ ನೀಡಿದ್ದಾರೆ. ಇದರಿಂದ ಬಡಜನತೆ ಕಂಗಾಲಾಗಿ ನ್ಯಾಯಾಕ್ಕಾಗಿ ಜಿಲ್ಲಾಧಿಕಾರಿಗಳ ಗಮನ ಸೆಳೆಯುವ ಮೂಲಕ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಪಂಚಾಯ್ತಿ ವ್ಯಾಪ್ತಿಯ ಸರ್ವೆನಂ. 157/2(19), 157/20, 157/3, 157/2ರಲ್ಲಿ ತಲೆತಲಾಂತರ ದಿಂದ ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಇವರ ತೋಟದ ಮಧ್ಯದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿ ಅನಧಿಕೃತ ವಾಗಿ ಹದ್ದುಬಸ್ತು ಕಲ್ಲನ್ನು ಹಾಕುತ್ತಿರುವ ಸಂದರ್ಭ ಗಿರಿಜನರು ಪ್ರತಿಭಟಿಸಿ; ಸಿಬ್ಬಂದಿಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಜಾಗದ ಮಧ್ಯದಲ್ಲಿ ಟ್ರಂಚ್‍ಗಳನ್ನು ಮಾಡುವ ಹುನ್ನಾರ ನಡೆದಿದೆ.

ಕಾಲೋನಿಯಲ್ಲಿ ಒಂದೆಡೆ ಸೇರಿ ಜಿಲ್ಲಾಡಳಿತಕ್ಕೆ ಹೋರಾಟದ ಮುನ್ಸೂಚನೆ ನೀಡಿದ ಸಂದರ್ಭ ಕಾಲೋನಿಯ ನಿವಾಸಿಗಳಾದ ಬೆಟ್ಟಕುರುಬರ ಮಾರ, ಜಗದೀಶ್, ಸತೀಶ್, ಕಾಳಿ, ಸುನೀತ, ಚೋಮ, ರಮೇಶ, ಕಾಳ, ಮಣಿ, ಗಣೇಶ್, ಕ್ಯಾತ, ಲತೇಶ್, ಪ್ರಕಾಶ್, ಚೋಮ, ಮನು ಸೇರಿದಂತೆ ಬಿ.ಶೆಟ್ಟಿಗೇರಿ, ಕುಂದ ಗ್ರಾಮಸ್ಥರಾದ ಕಡೇಮಾಡ ಅಶೋಕ್, ತಿತೀಮಾಡ ಲಾಲಾ, ನಾಮೇರ ಬೆಳ್ಯಪ್ಪ, ಬಲ್ಲಣಮಾಡ ನಾಚಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.