ಕೂಡಿಗೆ, ಮೇ 7: ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಇಲ್ಲಿನ ಕೂಡಿಗೆ ಕ್ರೀಡಾ ವಸತಿ ಶಾಲೆಯ ಕ್ರೀಡಾರ್ಥಿ ಹಾಗೂ ಆಕೆಯ ತಂದೆ ದುರ್ಮರಣ ಹೊಂದಿರುವ ದುರ್ಘಟನೆ ಸಂಭವಿಸಿದೆ.
ಮೂಲತಃ ಹುಬ್ಬಳ್ಳಿ ನಿವಾಸಿ, ಮಲ್ಲಿಕಾರ್ಜುನ ಕೆರಳ್ಳಿ ಅವರ ಪುತ್ರಿ ಸುಜಾತಾ ಕೆರಳ್ಳಿ ಇವರುಗಳೇ ಸಾವಿಗೀಡಾದ ದುರ್ದೈವಿ. ಸುಜಾತಾ ಕೂಡಿಗೆ ಕ್ರೀಡಾಶಾಲೆಯಲ್ಲಿ ಹತ್ತನೇ ತರಗತಿ ಪೂರೈಸಿದ್ದು, ಕಳೆದ ವರ್ಷ ಅಸ್ಸಾಂ ರಾಜ್ಯದ ಕಾಲಿಬೋರ್‍ನಲ್ಲಿ ನಡೆದ ರಾಷ್ಟ್ರೀಯ ಸಬ್‍ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿಕೂರ್ಗ್ ತಂಡದ ಪರವಾಗಿ ಆಡಿ ಉತ್ತಮ ಸಾಧನೆಯೊಂದಿಗೆ ಬೆಳ್ಳಿ ಪದಕ ಗೆಲ್ಲುವಲ್ಲಿ ಪಾತ್ರ ವಹಿಸಿದ್ದಳು. ಈಚೆಗೆ 12 ದಿನಗಳ ಕಾಲ ಕೂಡಿಗೆಯಲ್ಲಿ ಮೈಸೂರು ವಸತಿ ನಿಲಯ ಪ್ರವೇಶಾತಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ತಾ. 5ರಂದು ಊರಿಗೆ ಮರಳಿದ್ದಳು. ಮತ್ತೆ ಕೂಡಿಗೆ ನಿಲಯದಲ್ಲಿದ್ದುಕೊಂಡೇ ಪಿಯುಸಿ ವ್ಯಾಸಂಗ ಮುಂದುವರಿಸಲು ನಿರ್ಧರಿಸಿದ್ದಳು. ಆದರೆ ಅಪಘಾತ ಈಕೆಯನ್ನು ಬಲಿಪಡೆದಿದೆ. ಸುಜಾತಾ ಸಾವಿಗೆ ಕೂಡಿಗೆ ವಸತಿ ನಿಲಯದವರು, ಹಾಕಿಕೂರ್ಗ್ ಸಂಸ್ಥೆಯವರು, ಸಹ ಕ್ರೀಡಾರ್ಥಿಗಳು ಕಂಬನಿ ಮಿಡಿದಿದ್ದಾರೆ.