ಶನಿವಾರಸಂತೆ, ಮೇ 7: ಸಮೀಪದ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಿಹಳ್ಳ ಗ್ರಾಮದ ಪ್ರಕೃತಿಯ ಮಡಿಲಲ್ಲಿರುವ ಕಾಗಿನಹರೆ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜೆ ನಡೆಯಿತು. ಕಾಗಿನಹರೆ ದೇವಾಲಯ ಶನಿವಾರಸಂತೆಯಿಂದ 40 ಕಿ.ಮೀ. ದೂರದಲ್ಲಿದೆ. ವರ್ಷಕ್ಕೊಮ್ಮೆ ಮೇ ತಿಂಗಳ ಮೊದಲ ಭಾನುವಾರದಂದು ನಡೆಯುವ ಈ ಪೂಜಾ ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ವಿವಿಧ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಸಂಕಲ್ಪ ಮಾಡಿಕೊಂಡ ಹರಕೆ - ಹಾಡ್ಯಗಳನ್ನು ಒಪ್ಪಿಸುತ್ತಾರೆ. ಹಂದಿ, ಕುರಿ, ಕೋಳಿ ಪ್ರಾಣಿ ಬಲಿಯನ್ನು ಹರಕೆ ರೂಪದಲ್ಲಿ ಒಪ್ಪಿಸಲಾಗುತ್ತದೆ. ಮಾಡಿಕೊಂಡ ಹರಕೆ ನೆರವೇರಿದರೆ ಮಾತ್ರ ಶಿರಾಡಿ ಅಮ್ಮನೆಂದು ಕರೆಯಲ್ಪಡುವ ಚಾಮುಂಡೇಶ್ವರಿ ದೇವಿಗೆ ಜಾತ್ರಾ ಸಂದರ್ಭದಲ್ಲಿ ಭಕ್ತರು ಹರಕೆ ತೀರಿಸುತ್ತಾರೆ.