ಮಡಿಕೇರಿ, ಮೇ 6: ರಾಜ್ಯ ಬಾಲಭವನ ಸೊಸೈಟಿ, ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಕಡಗದಾಳು ಸರ್ಕಾರಿ ಪ್ರೌಢಶಾಲೆ ಯಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಶಿಬಿರದಲ್ಲಿ ಕಡಗದಾಳು, ನೀರುಕೊಲ್ಲಿ, ಬೊಟ್ಲಪ್ಪ ಪೈಸಾರಿ, ಕ್ಲೋಸ್ಬರ್ನ್, ಕತ್ತಲೆಕಾಡು ಹಳ್ಳಿಗೆ ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರ ಪರಿಶ್ರಮದಿಂದ ಮತ್ತು ಪೋಷಕರ ಪ್ರೋತ್ಸಾಹದಿಂದ ಸುಮಾರು 90 ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳಲು ಮುಂದಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿ, ತಾ. 12 ರವರೆಗೆ ನಡೆಯುವ ಶಿಬಿರದಲ್ಲಿ ಹಾಡು, ನೃತ್ಯ, ಕ್ರಾಫ್ಟ್, ಯೋಗ, ಚಿತ್ರಕಲೆ, ಆಟಗಳು, ಮೌಲ್ಯಾಧಾರಿತ ಜೀವನಕ್ಕೆ ಉಪಯೋಗವಾಗುವಂತಹ ಉಪನ್ಯಾಸ, ಮ್ಯಾಜಿಕ್ಗಳನ್ನು ಒಳಗೊಂಡಿದ್ದು, ಎಲ್ಲಾ ಶಿಬಿರಾರ್ಥಿ ಗಳು ಪ್ರತಿಯೊಂದು ವಿಭಾಗದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ ಗಂಗ, ಆರೋಗ್ಯ ಇಲಾಖೆಯ ಸಿಬ್ಬಂದಿ ಭಾರತಿ, ಕೀರ್ತನ, ಲೀಲಾವತಿ, ತಾಲೂಕು ಒಕ್ಕೂಟದ ಕಾರ್ಯದರ್ಶಿ ಗೀತಾ, ಶಿಕ್ಷಕಿ ಭವಾನಿ, ಗ್ರಾಮ ಲೆಕ್ಕಿಗರಾದ ಅನಿತಾ, ಸುಜಾತ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಸಂಪನ್ಮೂಲ ವ್ಯಕ್ತಿಗಳಾದ ಕುಮಾರಸ್ವಾಮಿ, ವರ್ಷಿಣಿ ಪಾಲ್ಗೊಂಡಿದ್ದರು. ಮಹಿಳಾ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ವಾಗತಿಸಿದರು. ಶಿಬಿರಕ್ಕೆ ಸಹಕಾರ ನೀಡುತ್ತಿರುವ ಗ್ರಾಮ ಪಂಚಾಯಿತಿ, ಯುವಕ ಸಂಘ, ಗ್ರಾಮಸ್ಥರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಕಡಗದಾಳು ಪ್ರಾಥಮಿಕ ಶಾಲೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿದರು. ಮಹಿಳಾ ಮೇಲ್ವಿಚಾರಕಿ ಶೀಲಾ ನಿರೂಪಿಸಿ, ವಂದಿಸಿದರು.