ಕುಶಾಲನಗರ, ಮೇ 7: ಕುಶಾಲನಗರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವನ್ನು ಖಂಡಿಸಿ ನಾಗರಿಕರು, ಉದ್ಯಮಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ದಾಗಿ ಪ.ಪಂ. ಸದಸ್ಯ ಪ್ರಮೋದ್ ಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಕುಶಾಲನಗರ ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಳೆ ನೀರು ಹರಿಸಲು ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಕಳೆದ 4 ತಿಂಗಳಿನಿಂದ ನಡೆಯು ತ್ತಿದ್ದು, ಅರ್ಧಕ್ಕೆ ಕೆಲಸ ಸ್ಥಗಿತಗೊಂಡ ಕಾರಣ ಈ ವ್ಯಾಪ್ತಿಯ ನಾಗರಿಕರಿಗೆ ಅನಾನುಕೂಲ ಉಂಟಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಬದಿಯ ಮನೆಗಳಿಗೆ ಕಲುಷಿತ ನೀರು ನುಗ್ಗುತ್ತಿದ್ದು, ಕಿರಿಕಿರಿ ಉಂಟಾಗುತ್ತಿದೆ ಎಂದರು. ಹಲವು ತಿಂಗಳಿನಿಂದ ವ್ಯಾಪಾರಸ್ಥರಿಗೂ ಕೂಡ ವ್ಯಾಪಾರಕ್ಕೆ ಅಡ್ಡಿಯುಂಟಾಗುತ್ತಿದ್ದು, ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಬೇಕು. ವೈಜ್ಞಾನಿಕ ವಾಗಿ ಕಲುಷಿತ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಂಚಾಯಿತಿ ನಕ್ಷೆ ಪ್ರಕಾರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಹೊರತಾಗಿ ಅಧಿಕಾರಿಗಳು ಮನ ಬಂದಂತೆ ಕಾಮಗಾರಿ ಕೈಗೊಳ್ಳುವದು ಸರಿಯಲ್ಲ ಎಂದು ಇಂದಿರಾ ಲಕ್ಷ್ಮಣ್ ಹಾಗೂ ಹರ್ಷ ಹೇಳಿದರು. ಗೋಷ್ಠಿಯಲ್ಲಿ ನಿವಾಸಿಗಳಾದ ಲಕ್ಷ್ಮಣ್, ಉದಯಕುಮಾರ್, ವರದ ಮತ್ತು ಸುತ್ತಮುತ್ತಲ ನಿವಾಸಿಗಳು ಇದ್ದರು.