ಕುಶಾಲನಗರ, ಮೇ 6: ಕುಶಾಲನಗರ ಪಟ್ಟಣದ 3ನೇ ಬ್ಲಾಕ್‍ನಲ್ಲಿರುವ ಅಂದಾಜು 20 ಕುಟುಂಬಗಳು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿ, ಚುನಾಯಿತ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರೈತ ಸಂಘ ಆರೋಪ ವ್ಯಕ್ತಪಡಿಸಿದೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಣ್ಣಪ್ಪ, 3ನೇ ಬ್ಲಾಕ್‍ನಲ್ಲಿ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ 20 ಕುಟುಂಬಗಳು ವಾಸಿಸುತ್ತಿದ್ದು ಇದುವರೆಗೆ ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಕುಡಿಯುವ ನೀರು, ವಿದ್ಯುತ್, ರಸ್ತೆ ಸಂಪರ್ಕದಿಂದ ವಂಚಿತರಾಗಿದ್ದು, ಕೊಳಗೇರಿ ಮಾದರಿಯಲ್ಲಿ ನಿವಾಸಿಗಳು ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರಕಾರದ ಸೌಭಾಗ್ಯಲಕ್ಷ್ಮಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬಗಳನ್ನು ಅಳವಡಿ ಸಿದ್ದರೂ ಪ.ಪಂ. ಕೆಲಸ ನಿರ್ವಹಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಇದೇ ಜಾಗದಲ್ಲಿ ಫ್ಲ್ಯಾಟ್ ಮಾದರಿಯಲ್ಲಿ ಕಟ್ಟಡ ನಿರ್ಮಿಸಿ ಬಡವರಿಗೆ ಹಂಚುವ ಭರವಸೆ ನೀಡುವ ಮೂಲಕ ನಿವಾಸಿ ಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಜಿಲ್ಲಾ ಕಾರ್ಯ ದರ್ಶಿ ಎಸ್.ಆರ್. ಮಂಜುನಾಥ್ ಮಾತನಾಡಿ, 1991 ರಿಂದಲೂ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದಿರುವ ನಿವಾಸಿಗಳನ್ನು ಕಡೆಗಣಿಸಿರುವದು ವಿಷಾದಕರ ಸಂಗತಿ. ಚುನಾಯಿತ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುವದಕ್ಕೆ ಮಾತ್ರ ಸೀಮಿತವಾಗಿದ್ದು, ಯಾವದೇ ಸೌಕರ್ಯವಿಲ್ಲದೆ ನಿವಾಸಿಗಳು ಶೋಚನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕೂಡಲೇ ಮೂಲಭೂತ ಸೌಕರ್ಯ ಕಲ್ಪಿಸಲು ಪ.ಪಂ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಮುಂದಿನ 15 ದಿನಗಳ ಒಳಗಾಗಿ ಯಾವದೇ ಕ್ರಮ ಕೈಗೊಳ್ಳದಿದ್ದರೆ ನಿವಾಸಿಗಳೊಡಗೂಡಿ ಸಂಘದ ವತಿಯಿಂದ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ನಿವಾಸಿಗಳಾದ ರುಕಿಯ, ಗೌರಮ್ಮ, ಅಮೀನ, ಸಾವಿತ್ರಿ ಇದ್ದರು.