ಶನಿವಾರಸಂತೆ, ಮೇ 6: ಆಲೂರು ಸಿದ್ದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ನಡೆದ ಬಸವೇಶ್ವರ ದೇವರ ಉತ್ಸವದಲ್ಲಿ ಅಡ್ಡೆಯನ್ನು ಹೊತ್ತು ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರು ವಾಲಗದ ಮುಂದೆ ಕುಣಿದರು ಎಂಬ ಕಾರಣಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಲಾಯಿತು ಎಂದು ನೀಡಿದ ದೂರಿನ ಮೇಲೆ ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಲಂಬಿ ಗ್ರಾಮದ ಪರಿಶಿಷ್ಟ ಜಾತಿಯ ಜೆ.ಕೆ. ರಾಜೇಶ್ ಎಂಬವರು ವಾಲಗದ ಮುಂದೆ ಕುಣಿದರು ಎಂಬ ಕಾರಣಕ್ಕಾಗಿ ಮಾಲಂಬಿ ಗ್ರಾಮದ ಸುಂದರ ಹಾಗೂ ನವೀನ ಎಂಬವರು ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಶನಿವಾರಸಂತೆ ಪೋಲಿಸ್ ಠಾಣೆಗೆ ದೂರು ನೀಡಿದರು. ಈ ವಿಚಾರ ತಿಳಿದ ಆರೋಪಿಗಳಾದ ಸುಂದರ, ನವೀನ , ಹಾಗೂ ಮಾಲಂಬಿ ಗ್ರಾಮದ ಗಂಗಾಧರ ಈ ಮೂವರು ಬುಧವಾರ ರಾತ್ರಿ ರಾಜೇಶ್ ಅವರ ಮನೆಯ ಅಂಗಳಕ್ಕೆ ಹೋಗಿ ಪೊಲೀಸ್ ಪುಕಾರು ನೀಡಿದುದರ ವಿರುದ್ಧ ಮತ್ತೆ ಹಲ್ಲೆ ಮಾಡಿರುವದಾಗಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ಮೇಲೆ ನೀಡಿದ ದೂರಿನ ಮೇಲೆ ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ಅವರು ಎಸ್. ಸಿ. / ಎಸ್. ಟಿ. ಆಕ್ಟ್ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.