(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ 6: ಕಾಲ ಬದಲಾಗುತ್ತಿದೆ, ಅದರಂತೆ ಜನರು ಬದಲಾವಣೆ ಬಯಸಿದ್ದಾರೆ. ಆಧುನಿಕ ತಂತ್ರಜ್ಞಾನದ ಯುಗ ಶರವೇಗದಲ್ಲಿ ನಡೆಯುತ್ತಿದೆ. ಆದರೆ ಅತ್ಯಧಿಕ ವರಮಾನವಿರುವ ವಾಣಿಜ್ಯ ಕೇಂದ್ರ ಎಂದೇ ಕರೆಯಲ್ಪಡುವ ಗೋಣಿಕೊಪ್ಪಲು ನಗರದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. 21 ಸಂಖ್ಯೆ ಬಲದ ಗ್ರಾಮ ಪಂಚಾಯ್ತಿಯಲ್ಲಿ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳೆಲ್ಲ ಮಣ್ಣು ಪಾಲಾಗಿದೆ. ಯಾವೊಬ್ಬ ಸದಸ್ಯನೂ ಅಭಿವೃದ್ದಿ ಕಡೆಗೆ ಗಮನ ನೀಡದೇ ಇರುವದು ಇಲ್ಲಿನ ಜನತೆಗೆ ಒದಗಿದ ದುರಂತಗಳಲ್ಲೊಂದು.ವಾಣಿಜ್ಯ ನಗರದಲ್ಲಿ ಈ ಹಿಂದೆ ಪುರ ಸಭೆ ಇದ್ದ ಸಂದರ್ಭ ಬುಟ್ಟಿಯಂಡ ಅಪ್ಪಾಜಿ ಅವರು ಅಧ್ಯಕ್ಷರಾಗಿದ್ದ ವೇಳೆ ನೂತನ ಬಸ್ ನಿಲ್ದಾಣ,ತಂಗುದಾಣ ಹಾಗೂ ಶೌಚಾಲಯವನ್ನು 1970ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲೆಯಲ್ಲಿಯೇ ಮಾದರಿ ಬಸ್ ನಿಲ್ದಾಣ ಎಂಬ ಹೆಸರು ಗಳಿಸಿತ್ತು. ಬಸ್ ನಿಲ್ದಾಣ 45 ವರ್ಷ ಗಳಿಗೂ ಅಧಿಕ ಸಮಯದವರೆಗೂ ಗಟ್ಟಿಮುಟ್ಟಾಗಿತ್ತು. ಮಳೆಗಾಲ ಸಂದರ್ಭ ನಿಲ್ದಾಣದ ಮುಂಭಾಗ ಕೊಂಚ ಕುಸಿದು ಬಿದ್ದಿತ್ತು. ಕೂಡಲೇ ಹಳೆಯದಾದ ಕಟ್ಟಡವನ್ನು ಕೆಡವಲು ರಾತ್ರೋರಾತ್ರಿ ಕ್ರಮ ಕೈಗೊಳ್ಳಲಾಯಿತು. ಆದರೆ ಕೆಡವಿದ ವೇಗದಲ್ಲಿ ಹೊಸ ಬಸ್ ನಿಲ್ದಾಣದ ಕನಸ್ಸು ನನಸಾಗಲಿಲ್ಲ. ಅಷ್ಟೊತ್ತಿಗಾಗಲೇ ನೂತನ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಿತ್ತು,
ನೂತನ ಆಡಳಿತ ಮಂಡಳಿ ಉತ್ತಮ ಕೆಲಸ ಮಾಡುವ ನಿರೀಕ್ಷೆಯಲ್ಲಿದ್ದ ಜನತೆಗೆ ನಿರೀಕ್ಷೆಗಳು ಮತ್ತೆ ಮತ್ತೆ ಹುಸಿಯಾಗತೊಡಗಿದವು. ಜನತೆಗೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹೈಟೆಕ್ ಬಸ್ ನಿಲ್ದಾಣ ಕಟ್ಟುವ ಕೆಲಸಕ್ಕೆ ಕೆಲವು ಪಂಚಾಯ್ತಿ ಸದಸ್ಯರು ಸ್ವಇಚ್ಚೆಯಿಂದ ಆಸಕ್ತಿ ವಹಿಸಿ ನೀಲಿ ನಕ್ಷೆ ತಯಾರು ಮಾಡಿದ್ದರು. ರೂ. 30 ಕೋಟಿ ವೆಚ್ಚದಲ್ಲಿ ಕೆಲಸ ನಿರ್ವಹಿಸಲು ಕೇರಳದ ಸಂಸ್ಥೆ ಮುಂದೆ ಬಂದಿತ್ತು. ಮೂರು ಅಂತಸ್ತಿನಲ್ಲಿ ನೆಲ ಮಾಳಿಗೆ ಸೇರಿದಂತೆ ಮೂರೂವರೆ ಎಕ್ರೆ ಜಾಗದಲ್ಲಿ 25 ವರ್ಷಕ್ಕೆ ‘ಲೀಸ್’ ಪಡೆಯಲು ಸಂಸ್ಥೆ ತಯಾರಿ ನಡೆಸಿತ್ತು. ಇನ್ನೇನು ಕಾಗದ ಪತ್ರಗಳಿಗೆ ಸಹಿ ಆಗಬೇಕು ಅನ್ನುವಷ್ಟರಲ್ಲಿ ಇನ್ನು ಕೆಲವು ಪಂಚಾಯಿತಿ(ಮೊದಲ ಪುಟದಿಂದ) ಸದಸ್ಯರ ಕಮಿಷನ್ ಆಸೆಗೆ ಇಡೀ ಯೋಜನೆ ಹಳ್ಳ ಹಿಡಿದಿತ್ತು.
ಸುಮಾರು ರೂ.30 ಕೋಟಿ ವೆಚ್ಚದ ಬಸ್ ನಿಲ್ದಾಣ ಇಲ್ಲಿಯೂ ನಿರ್ಮಾಣವಾಗಬೇಕಾದ ಅಗತ್ಯತೆ ಕುರಿತು ಹಲವು ಗ್ರಾಮದ ಪ್ರಮುಖರು ಉತ್ತಮ ಸಲಹೆ ನೀಡಿದ್ದರು. ಆದರೆ ಇಲ್ಲಿನ ಕಾಂಗ್ರೆಸ್ -ಬಿಜೆಪಿ ಚುನಾಯಿತ ಸದಸ್ಯರ ನಡುವೆ ಸಹಮತ ಕೊರತೆ ಹಿನ್ನೆಲೆ ನೆನೆಗುದಿಗೆ ಬೀಳುವಂತಾಯಿತು. 21 ಸ್ಥಾನಗಳಲ್ಲಿ 14 ಸ್ಥಾನಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು ವಿರೋಧ ಪಕ್ಷವಾಗಿ ಕೂರುವಂತೆ ಸ್ಥಿತಿ ನಿರ್ಮಾಣವಾಗಿದೆ. ಕೇವಲ 7 ಸ್ಥಾನಗಳಿಸಿದ ಬಿಜೆಪಿ ಬೆಂಬಲಿತರು ಮೀಸಲಾತಿ ಲಾಭ ಪಡೆದು ಅಧ್ಯಕ್ಷೆ - ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿರುವದು ದಿನನಿತ್ಯ ದ್ವಂದ್ವ ನಿಲುವಿಗೆ ಕಾರಣವಾಗಿದೆ. ಪಂಚಾಯಿತಿ ಅಧ್ಯಕ್ಷರು ವಾರಕ್ಕೊಮ್ಮೆ ಪಂಚಾಯ್ತಿಯಲ್ಲಿ ಕಾಣಸಿಗುವದೇ ಅಪರೂಪ. ಕಾರಣ ವಿವಾಹಾನಂತರ ಇವರು ಕೇರಳದಲ್ಲಿ ನೆಲೆಸಿದ್ದಾರೆ.
ಸಂದರ್ಭಕ್ಕನುಗುಣವಾಗಿ ಪಂಚಾಯ್ತಿಗೆ ಆಗಮಿಸುತ್ತಾರೆ. ಉಪಾಧ್ಯಕ್ಷರಂತೂ ಆರಿಸಿ ಬಂದ ನಂತರ ಪಂಚಾಯ್ತಿಯಲ್ಲಿ ಉಪಸ್ಥಿತರಿದ್ದ ಬಗ್ಗೆ ಮಾಹಿತಿಗಳೇ ಇಲ್ಲ. ಪಂಚಾಯ್ತಿ ಸಭೆ, ಗ್ರಾಮ ಸಭೆ, ವಾರ್ಡ್ ಸಭೆಗಂತೂ ಬಂದ ನಿದರ್ಶನಗಳೇ ಇಲ್ಲ. ಕೇವಲ ರಾಜಕೀಯ ಮೇಲಾಟದಲ್ಲಿ ನಾನು ನೀನು ಎಂದು ಸಮಯ ಕಳೆಯುತ್ತಿರುವ ಇಲ್ಲಿನ ಕೆಲವು ಸದಸ್ಯರ ನಡೆಗೆ ಮುಖ್ಯ ರಸ್ತೆ ಬದಿಯಲ್ಲಿ ಹಲವು ದಿನಗಳಿಂದ ಕೊಳೆತು ನಾರುತ್ತಿರುವ ಕಸಗಳ ರಾಶಿಯೇ ಸ್ಪಷ್ಟ ಉದಾಹರಣೆಯಾಗಿದೆ. ಸಮೀಪದ ಅರುವತ್ತೊಕ್ಲು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಮಂಜೂರಾಗಿದ್ದರೂ ಇದಕ್ಕಾಗಿ ಪಂಚಾಯ್ತಿ ನಿಧಿಯಿಂದ ರೂ. 17 ಲಕ್ಷ ಹಣವನ್ನು ವಿನಿಯೋಗಿಸಿದ್ದರೂ ಸಮಸ್ಯೆಗಳು ಹಾಗೇ ಉಳಿದಿವೆ.
ದಿನದಿಂದ ದಿನಕ್ಕೆ ಗೋಣಿಕೊಪ್ಪಲು ಮಾರ್ಗದಲ್ಲಿ ಖಾಸಗಿ, ರಾಜ್ಯ ರಸ್ತೆ ಸಾರಿಗೆ, ಅಂತರರಾಜ್ಯ ರಸ್ತೆ ಸಂಚಾರ ಒತ್ತಡ ದಿನನಿತ್ಯ ಅಧಿಕವಾಗುತ್ತಿದೆ. ಇಲ್ಲಿ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಚಾಲಕರ ನಡುವೆ ದಿನನಿತ್ಯ ಜಟಾಪಟಿ ಸಾಮಾನ್ಯವಾಗಿದೆ. ಇರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಶುಚಿತ್ವವಿಲ್ಲದೆ. ಧೂಮಪಾನಿಗಳ, ಮದ್ಯವ್ಯಸನಿಗಳ ತಾಣವಾಗಿದೆ. ಮಳೆ ಸುರಿದರಂತೂ ಕೆಸರು ಮಯವಾಗಿರುವ ಈ ನಿಲ್ದಾಣದಲ್ಲಿ ರಾತ್ರಿಯಂತೂ ವಿದ್ಯುತ್ ದೀಪವಿಲ್ಲದೆ ಪುಂಡ ಪೋಕರಿಗಳು ನಿದ್ರೆ ಮಾಡುವ ಸ್ಥಳವಾಗಿದೆ.
ಸುಸಂಸ್ಕøತರು, ಮಹಿಳೆಯರು ನಿಲ್ದಾಣದ ಒಳಗೆ ಕಾಲಿಡುವಂತಿಲ್ಲ. ಕುಡಿಯುವ ನೀರಿಗಂತೂ ಅವಕಾಶವೇ ಇಲ್ಲ. ಬಾಯಾರಿಕೆಯಾದವರು ಸಮೀಪದ ಬೇಕರಿ ಹೋಟೆಲ್‍ಗೆ ತೆರಳಬೇಕಾದ ಅನಿವಾರ್ಯತೆ. ವೀರಾಜಪೇಟೆ-ಮಡಿಕೇರಿಯತ್ತ ತೆರಳುವ ಬಸ್‍ಗಳು ಮುಖ್ಯರಸ್ತೆಯ ಬದಿಯಲ್ಲಿಯೇ ನಿಲ್ಲಬೇಕಾಗಿದೆ. ಮೈಸೂರಿನತ್ತ ತೆರಳುವ ಬಸ್‍ಗಳು ಇಲ್ಲಿನ ‘ರಿಫಾರ್‍ಮರ್ಸ್ ಕ್ಲಬ್’ ಮುಂಭಾಗವೇ ನಿಲ್ಲುವಂತಾಗಿರುವದರಿಂದಾಗಿ ನಿಲ್ದಾಣದ ಮೇಲೆ ಅಧಿಕ ಒತ್ತಡ ಉಂಟಾಗಿ ಇತರ ಲಘುವಾಹನಗಳು, ಸರಕು ಸಾಗಾಟ ವಾಹನಗಳು, ಪಾದಚಾರಿಗಳು, ಶಾಲಾ-ಕಾಲೇಜು, ವಿದ್ಯಾರ್ಥಿಗಳು, ಪ್ರಯಾಣಿಕರು ನಿರಂತರ ಬವಣೆ ಅನುಭವಿಸಬೇಕಾಗಿ ಬಂದಿದೆ.
ಕೋಟಿಗಟ್ಟಲೆ ಬಂಡವಾಳ ಕ್ರೋಢೀಕರಣವಾಗುವ ಪಂಚಾಯ್ತಿಯಲ್ಲಿ ಮೂಲ ಸೌಕರ್ಯಗಳು ನಾಗರಿಕರಿಗೆ ಲಭ್ಯವಾಗುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳಲ್ಲಿರುವ ವರ್ತಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಂಪೂರ್ಣ ಎಡವಿದೆ. ಶೌಚಾಲಯ ಸೇರಿದಂತೆ ಮಾಂಸ, ಮೀನು ಮಾರುಕಟ್ಟೆಯಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಗೋಣಿಕೊಪ್ಪಲಿನ, ಕಾರು ನಿಲ್ದಾಣ, ಜೀಪು ನಿಲ್ದಾಣ, ಮಿನಿ ಲಾರಿ, ಆಟೋ, ಗೂಡ್ಸ್ ಆಟೋ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದಟ್ಟಣೆ ವಿಪರೀತವಾಗಿದೆ.
ತಳ್ಳುಗಾಡಿಗಳ ಕಾಟ
ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಓಡಾಡುವದೇ ದೊಡ್ಡ ಸಾಹಸ. ಸಂಜೆ 4 ಗಂಟೆಯಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವಂತಿಲ್ಲ. ತಳ್ಳುಗಾಡಿಗಳ ಹಾವಳಿಯಿಂದಾಗಿ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ತಳ್ಳುಗಾಡಿಗಳು ಬಸ್ ನಿಲ್ದಾಣದಲ್ಲಿರುವ ಖಾಲಿ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿದೆ. ಯಾವದೇ ಪಂಚಾಯಿತಿ ಸದಸ್ಯರು,ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ಈ ಬಗ್ಗೆ ಚಕಾರ ವೆತ್ತುತ್ತಿಲ್ಲ. ಬಟ್ಟೆ, ಹಣ್ಣು ಹಂಪಲು, ಔಷಧಿ ಮಾರುವವರು, ನಿಲ್ದಾಣವನ್ನು ಅತಿಕ್ರಮಣ ಮಾಡಿದ್ದಾರೆ. ಇವರಿಂದ ಪಂಚಾಯ್ತಿ 30 ರೂಪಾಯಿ ಶುಲ್ಕ ಪಡೆಯುವ ದುರ್ಗತಿ ಬಂದಿರುವದು ವಿಪರ್ಯಾಸ. ಯಾವದೇ ಅಧಿಕಾರಿ ಜನಪ್ರತಿನಿಧಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೇವಲ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲೇ ದಿನ ಕಳೆಯುತ್ತಿದ್ದಾರೆ.
ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶೌಚಾಲಯ ಪ್ರವೇಶಕ್ಕೆ ಸಾರ್ವಜನಿಕರಿಂದ 5 ರೂ. ಸಂಗ್ರಹಿಸುತ್ತಿದ್ದಾರೆ. ಆದರೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಪೈಪ್‍ಗಳು ಒಡೆದು ತೂರಾಡುತ್ತಿವೆ. ಎಲ್ಲೆಂದರಲ್ಲಿ ಬಾಟಲಿಗಳು, ರಾರಾಜಿಸುತ್ತಿವೆ. ಬೀಡಿ ಸಿಗರೇಟುಗಳ ತುಂಡುಗಳು, ಗುಡ್ಡೆ ಗುಡ್ಡೆಗಳಾಗಿವೆ. ಪಂಚಾಯ್ತಿ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಈ ಬಗ್ಗೆ ನಿಗಾ ವಹಿಸುತ್ತಿಲ್ಲ.
ಬಸ್ ನಿಲ್ದಾಣ ಕುರಿತು ಅಭಿಮತ
ಕೊಡಗಿಗೆ ಎಂ.ಆರ್. ಸೀತಾರಾಮ್ ಉಸ್ತುವಾರಿ ಸಚಿವರಾದ ಸಂದರ್ಭ ವಿಶೇಷ ಆಸಕ್ತಿ ವಹಿಸಿ ಸುಮಾರು ರೂ. 2.15(215 ಲಕ್ಷ) ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಸಮ್ಮತಿ ದೊರಕಿತ್ತು. ಆಗಿನ ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್ ಅವರ ಮುಂದೆ ಯೋಜನೆಯ ಕಡತಕ್ಕೆ ಹಸಿರು ನಿಶಾನೆ ದೊರಕಿತ್ತು. ಪಂಚಾಯ್ತಿ ಸದಸ್ಯರ ಹೊಂದಾಣಿಕೆ ಕೊರತೆಯಿಂದ ಹೈಟೆಕ್ ಬಸ್ ನಿಲ್ದಾಣದ ವಿಷಯದಲ್ಲಿ ಹಿನ್ನಡೆಯಾಗಿದೆ.
-ಕದ್ದಣಿಯಂಡ ಹರೀಶ್ ಬೋಪಣ್ಣ, ಮಾಜಿ ಉಸ್ತುವಾರಿ ಸಚಿವರ ಆಪ್ತರು
ಹೈಟೆಕ್ ಬಸ್ ನಿಲ್ದಾಣ ಮತ್ತಷ್ಟು ಯೋಜನಾಬದ್ಧವಾಗಿ ನಿರ್ಮಾಣವಾಗಲಿ ಎಂಬ ಆಶಯ ಜನತೆಯದ್ದು. ಬೆಂಗಳೂರು, ಯಶವಂತಪುರ ಮುಂತಾದ ಬಸ್ ನಿಲ್ದಾಣದಲ್ಲಿ ಮೂರಂತಸ್ತು ಬಸ್ ನಿಲ್ದಾಣ ಮಾದರಿ ನಿರ್ಮಾಣವಾದಲ್ಲಿ ಇರುವ ಮೂರು, ಎಕರೆ ನಿವೇಶನದಲ್ಲಿ ಕಾರು ನಿಲ್ದಾಣ,ಆಟೋ,ಜೀಪು ಇತ್ಯಾದಿ ವಾಹನಗಳಿಗೂ ಸುಸಜ್ಜಿತ ನಿಲ್ದಾಣ ರೂಪುಗೊಳಿಸಲು ಸಾಧ್ಯವಿದೆ. ಬೆಂಗಳೂರು ಮಾದರಿ 24/7 ಶೌಚಾಲಯ ವ್ಯವಸ್ಥೆ ಇದ್ದಲ್ಲಿ ರಾತ್ರಿ ವೇಳೆಯ ಪ್ರಯಾಣಿಕರಿರಿಗೆ ಅದರಲ್ಲೂ ಮಹಿಳೆಯರು ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಪ್ರಯಾಣಿಕರಿಗೆ ಉತ್ತಮ ವಿಶ್ರಾಂತಿ ಕೊಠಡಿ,ಹೊಟೇಲ್,ಅಂಗಡಿ ಮಳಿಗೆ, ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ ಇತ್ಯಾದಿಗಳಿಗೂ ಸ್ಥಳಾವಕಾಶ ಸಿಗಲಿದೆ. ಭವಿಷ್ಯದಲ್ಲಿ ಗ್ರಾ.ಪಂ.ಗೆ ನೂತನ ಕಟ್ಟಡ ಸಂಕೀರ್ಣದಿಂದ ಆದಾಯ ಕ್ರೋಢೀಕರಣ ಮಾಡಲೂ ಅವಕಾಶವಿದೆ.ಆದರೆ ಸದಸ್ಯರ ಇಚ್ಚಾ ಶಕ್ತಿ ಕೊರತೆಯಿಂದ ಯಾವದೇ ಅಭಿವೃದ್ಧಿ ಚಿಂತನೆ ನಡೆಯುತ್ತಿಲ್ಲ. -ಬಿ.ಎನ್.ಪ್ರಕಾಶ್, ಗ್ರಾ.ಪಂ. ಸದಸ್ಯರು
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೊಡಗಿಗೆ ಆಗಮಿಸಿ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಣ್ಣಾನೂರಿನ ಬಿಲ್ಡರ್ ರೂ. 25 ಕೋಟಿ ಗೆ ಆಧುನಿಕ ಬಸ್ ನಿಲ್ದಾಣದ ಟೆಂಡರ್ ನೀಡಿದ್ದರು. ಈ ಬಗ್ಗೆ ನೀಲಿ ನಕ್ಷೆ ತಯಾರಿಸಿ ಕೊಟ್ಟಿದ್ದರು. ಆದರೆ ಕೆಲವು ಪಂಚಾಯತಿ ಸದಸ್ಯರಿಂದ ಹೂಡಿಕೆದಾರರಿಗೆ ಪೂರಕ ಬೆಂಬಲ ಸಿಗಲಿಲ್ಲ. ಇದರಿಂದ ಅತಿ ದೊಡ್ಡ ಯೋಜನೆ ಕೈ ಚೆಲ್ಲಿತು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಆಧುನಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲು ಪಂಚಾಯತಿ ಸದಸ್ಯರು ಕ್ರಮ ವಹಿಸಬೇಕು.
-ಕೆ.ಬಿ.ಗಿರೀಶ್ ಗಣಪತಿ, ಗ್ರಾಮದ ಹಿರಿಯರು
ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಂತೂ ಇಲ್ಲವೆ ಇಲ್ಲ. ಮಡಿವಂತರಿಗೆ ತಂಗುದಾಣದಲ್ಲಿ ಕೂರಲು, ನಿಲ್ಲಲು ಸಾಧ್ಯವಿಲ್ಲ. ಪಂಚಾಯ್ತಿ ನಿದ್ರಾವಸ್ಥೆಯಲ್ಲಿದೆ. ಯಾರನ್ನು ವಿಚಾರಿಸುವದು ಎಂಬದೇ ಅರ್ಥವಾಗುತ್ತಿಲ್ಲ.
-ಜಪ್ಪು ಸುಬ್ಬಯ್ಯ,ಉಪಾಧ್ಯಕ್ಷರು ಆಟೋಚಾಲಕರ ಸಂಘ
ಗೋಣಿಕೊಪ್ಪಲಿನ ಪ್ರಮುಖ ಸಮಸ್ಯೆಯನ್ನು ಆಲಿಸಲು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಅವರು ಹಿಂದೆ ಇಲ್ಲಿನ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದರು. ರೂ.30 ಕೋಟಿ ಬಂಡವಾಳ ಹೂಡಲು ಇಲ್ಲಿನ ಜನಪ್ರತಿನಿಧಿಗಳ ಕಿತ್ತಾಟದಿಂದಾಗಿ ಯಾವೊಬ್ಬ ಹೂಡಿಕೆದಾರನೂ ಇತ್ತ ಸುಳಿಯಲಿಲ್ಲ. ಈ ನಡುವೆ ಕಣ್ಣಾನೂರು ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ ಗುತ್ತಿಗೆದಾರನಿಗೆ ಗೋಣಿಕೊಪ್ಪಲಿನಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಮಾದರಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಇಚ್ಚೆ ಇತ್ತಾದರೂ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗುತ್ತಿಗೆದಾರ ಆಸಕ್ತಿ ಕಳೆದುಕೊಂಡಿದ್ದರು.
- ಓರ್ವ ನಾಗರಿಕ, ಗೋಣಿಕೊಪ್ಪಲು