ಸಿದ್ದಾಪುರ, ಮೇ. 6: ನದಿ ದಡದ ನಿವಾಸಿಗಳಿಗೆ ಶಾಶ್ವತ ನಿವೇಶನ ಒದಗಿಸಬೇಕೆಂದು ಸಿ.ಪಿ.ಐ.ಎಂ. ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ದಡದಲ್ಲಿ ಹಲವಾರು ವರ್ಷಗಳಿಂದ ನೂರಾರು ಕುಟುಂಬಗಳು ವಾಸವಾಗಿದ್ದು, ಪ್ರತಿ ವರ್ಷದ ಮಳೆಗಾಲದ ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿಯೂ ಹಲವಾರು ಮನೆಗಳು ಬಿರುಕುಬಿಟ್ಟಿದ್ದು, ಅಪಾಯದ ಅಂಚಿನಲ್ಲಿದೆ. ಕಳೆದ ಮಹಾಮಳೆಯ ಸಂದರ್ಭ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲಿಸಿ, ಶಾಶ್ವತ ಪರಿಹಾರದ ಭರವಸೆಯನ್ನು ನೀಡಿದ್ದರು. ಆದರೇ ವರ್ಷಗಳು ಕಳೆದರೂ ಈವರೆಗೂ ಯಾವದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್ ಮಾತನಾಡಿ, ವರ್ಷಂಪ್ರತಿ ಹೆಸರಿಗಷ್ಟೆ ಗಂಜಿ ಕೇಂದ್ರವನ್ನು ಆರಂಭಿಸಿ, ಬಳಿಕ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಮೊದಲು ನದಿ ದಡದ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಬೇಕು ಎಂದರು. ಗೋಷ್ಠಿಯಲ್ಲಿ ಸಿ.ಪಿ.ಐ.ಎಂ. ಗ್ರಾಮ ಸಮಿತಿ ಸದಸ್ಯರಾದ ಮುಸ್ತಫ, ಸಲಿ ಪೌಲೋಸ್ ಇದ್ದರು.