ಸೋಮವಾರಪೇಟೆ, ಮೇ 7: ಇಲ್ಲಿನ ರೇಂಜರ್ಸ್ ಬ್ಲಾಕ್‍ನಲ್ಲಿ ಟ್ರಸ್ಟ್ ಮೂಲಕ ಮಸೀದಿಗೆ ದಾನವಾಗಿ ನೀಡಿರುವ ಜಾಗದ ಒಳಗಿರುವ ದೇವಾಲಯ ಮತ್ತು ರಸ್ತೆ ವಿವಾದ, ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಿಂದ ಬಗೆಹರಿಯುವತ್ತ ಸಾಗುತ್ತಿದೆ.

ತಮ್ಮ ಕಚೇರಿಯಲ್ಲಿ ಉಭಯ ಕಡೆಯವರ ಸಭೆ ನಡೆಸಿರುವ ಜಿಲ್ಲಾಧಿಕಾರಿಗಳು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ವಕ್ಫ್ ಬೋರ್ಡ್‍ನ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್ ಸೇರಿದಂತೆ ಪ್ರಮುಖರು, ದೇವಾಲಯಕ್ಕೆ ಅಗತ್ಯವಿರುವ ರಸ್ತೆಗೆ ಯಾವದೇ ಸಮಸ್ಯೆಯಿಲ್ಲ ಎಂದರು.

ತಾ. 28 ಅಥವಾ 29ರಂದು ಇಲಾಖೆಯಿಂದ ಸರ್ವೆ ನಡೆಸಲಾಗುವದು. ಆ ನಂತರ ವಕ್ಫ್ ಬೋರ್ಡ್‍ನೊಂದಿಗೆ ಸಭೆ ನಡೆಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಅವರು ಅಭಿಪ್ರಾಯಿಸಿದ್ದು, ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈಗಿರುವ ಆಸ್ತಿ ವಕ್ಫ್ ಬೋರ್ಡ್‍ಗೆ ಸೇರಿದ್ದು, ಸರ್ವೆ ಕಾರ್ಯ ನಡೆಸಿದ ನಂತರ ಬೇಲಿ ಅಳವಡಿಸಲಾಗುವದು. ದೇವಾಲಯಕ್ಕೆ ತೆರಳುವ ರಸ್ತೆಗಾಗಿ ಗೇಟ್ ಅಳವಡಿಸಲಾಗುವದು. ದೇವಾಲಯಕ್ಕೆ ತೆರಳುವವರು ಈ ಗೇಟ್ ಮೂಲಕ ತೆರಳಬಹುದು. ಪೂಜೆಗೆ ಯಾವದೇ ಅಡ್ಡಿಯಿಲ್ಲ ಎಂದು ಕೆ.ಎ. ಯಾಕೂಬ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಶಾದಿಮಹಲ್, ಶಾಲೆ, ಖಬರಸ್ಥಾನ್, ನಿರ್ವಸತಿಗರಿಗೆ ಮನೆ ನಿರ್ಮಿಸಿಕೊಡುವ ಉದ್ದೇಶವಿದ್ದು, ನೂತನ ರಸ್ತೆಯನ್ನೂ ನಿರ್ಮಿಸಲಾಗುವದು. ಆ ರಸ್ತೆಯೂ ಸಹ ಸಾರ್ವಜನಿಕವಾಗಿರಲಿದ್ದು, ದೇವಾಲಯಕ್ಕೆ ಪೂಜೆಗಾಗಿ ತೆರಳಲು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಉಪ ವಿಭಾಗಾಧಿಕಾರಿ ಜವರೇಗೌಡ, ಡಿವೈಎಸ್‍ಪಿ ದಿನಕರ್ ಶೆಟ್ಟಿ, ಠಾಣಾಧಿಕಾರಿ ಶಿವಶಂಕರ್, ಸರ್ವೆ ಇಲಾಖೆಯ ಸೂಪರಿಂಡೆಂಟ್ ಹರೀಶ್ಚಂದ್ರ, ಡಿಡಿಎಲ್‍ಆರ್, ಆರ್.ಐ. ಸೇರಿದಂತೆ ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿದೆ. ದೇವಾಲಯದ ಪರವಾಗಿ ಸುಧಾಕರ್ ಶೆಟ್ಟಿ, ಶಿವಪ್ರಸಾದ್, ಎಂ.ಬಿ. ಉಮೇಶ್, ಅನಿಲ್, ಗಿರಿ, ಹನಫಿ ಜಾಮಿಯಾ ಮಸೀದಿಯ ಅಧ್ಯಕ್ಷ ಮುಕ್ರಂ ಬೇಗ್ ಬಾಬು, ಕಾರ್ಯದರ್ಶಿ ಯಾಸ್ಮೀನ್ ಪಾಷ, ಮುನೀರ್, ವಕ್ಫ್ ಬೋರ್ಡ್ ಕಾರ್ಯದರ್ಶಿ ಸೈಯದ್ ರೆಹಮಾನ್ ಸಭೆಯಲ್ಲಿ ಭಾಗವಹಿಸಿದ್ದರು.