ಗೋಣಿಕೊಪ್ಪಲು, ಮೇ 7: ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳೆಲೆ, ಧನುಗಾಲ, ಮಾಯಮುಡಿ, ತಿತಿಮತಿ ಹಾಗೂ ಸುಳುಗೋಡು ಸಂಪರ್ಕ ರಸ್ತೆಯು ಸೇರುವ ಕೋಣನಕಟ್ಟೆನಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಬಂದು ಸೇರುವ ಸ್ಥಳವಾಗಿದೆ. ಮುಂಜಾನೆ ವೇಳೆಯಲ್ಲಿ ಹಲವು ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿವೆ. ಈ ಜಂಕ್ಷನ್‍ನಲ್ಲಿ ವಾಹನ ದಟ್ಟಣೆ ಅಧಿಕವಿರುವದರಿಂದ ಸರ್ಕಲ್ ನಿರ್ಮಿಸಲು ಇಲ್ಲಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರತಿಭಟನೆ ವೇಳೆ ಗ್ರಾಮಸ್ಥರಾದ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪಿ.ಜಿ.ಅಪ್ಪಚ್ಚು, ಬಿ.ಸಿ.ಚಿಣ್ಣಪ್ಪ, ಪಾರ್ಥ ಕುಶಾಲಪ್ಪ, ಪ್ರವೀಣ್, ಕಾವೇರಿ ಅಪ್ಪಣ್ಣ, ರಕ್ಷಿತ್, ನಂಜಪ್ಪ, ಉಮ್ಮರ್, ಪ್ರಭಾಕರ್, ಸುದರ್ಶನ್, ರಾಜ ಸೇರಿದಂತೆ ಸ್ಥಳೀಯ ಆಟೋ ಚಾಲಕರು ಉಪಸ್ಥಿತರಿದ್ದರು.

ಕೋಣನಕಟ್ಟೆ ಜಂಕ್ಷನ್‍ನಲ್ಲಿ ಸರ್ಕಲ್ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳಿಗೆ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಲಾಗಿತ್ತು.ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದರು. ಇಲ್ಲಿಯ ತನಕ ಸಮಸ್ಯೆ ಬಗೆ ಹರಿದಿಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.