ವೀರಾಜಪೇಟೆ, ಮೇ 7: ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶ ಧಾರ್ಮಿಕ ತಳಹದಿ ಇರುವ ದೇಶವಾಗಿದ್ದರೂ ಧಾರ್ಮಿಕ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗುತ್ತಿದ್ದೇವೆಂದು ಮೈಸೂರಿನ ಜೆ.ಎಸ್.ಎಸ್. ವಿದ್ಯಾಪೀಠದ ನಿರ್ದೇಶಕ ಪೊ. ಮಲ್ಲಿಕಾರ್ಜುನ ಮೊರಬದ್ದ ಅಭಿಪ್ರಾಯಪಟ್ಟಿದ್ದಾರೆ.
ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ನಡೆದ ‘ಹೊಂಬೆಳಕು’ ಮಾಸಿಕ ತತ್ವ ಚಿಂತನ ಗೋಷ್ಠಿಯ 188ನೇ ಕಿರಣವನ್ನು ಉದ್ಘಾಟಿಸುತ್ತಾ ಈ ವಿಷಯವನ್ನು ತಿಳಿಸಿದರು. ಶಾಂತಿ ಮತ್ತು ಸಹಬಾಳ್ವೆಯ ಮೂಲಕ ಪ್ರೀತಿಯ ಸಮಾಜ ನಿರ್ಮಾಣವಾಗು ತ್ತದೆ. ಇಂದಿನ ಸಮಾಜ ವಿವಿಧ ಕಾರಣಗಳಿಂದ ದ್ವೇಷ ಬಿತ್ತರಿಸುವ ಕಾರ್ಯದಲ್ಲಿ ತೊಡಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.
ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶೈಲ ಬೀಳಗಿ ರಚಿಸಿರುವ ‘ಹೆಗ್ಗಿನ ಬುಗ್ಗಿ’ ಎಂಬ ಶೀರ್ಷಿಕೆಯ ಮಕ್ಕಳ ಕವನ ಸಂಕಲನವನ್ನು ಈ ಸಂದರ್ಭದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು.
ದಿವ್ಯಸಾನಿದ್ಯ ವಹಿಸಿದ್ದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಅಧ್ಯಯನದ ಕೊರತೆ ಮೌಲ್ಯಗಳ ಕುಸಿತಕ್ಕೆ ಕಾರಣ. ನಡೆ ಮತ್ತು ನುಡಿಯ ಸಾಮ್ಯತೆಯ ಅಭಾವ ಜೀವನ ಸಂಘರ್ಷಕ್ಕೆ ಎಡೆಯುಂಟುಮಾಡಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಮೋದೂರು ಮಹೇಶ್ ಆರಾಧ್ಯ, ಸಾಹಿತಿ ಮತ್ತು ಪ್ರಕಾಶಕ ಜೀನಹಳ್ಳಿ ಸಿದ್ದಲಿಂಗಪ್ಪ ಈ ಸಂದರ್ಭ ಮಾತನಾಡಿದರು. ಪಿ.ಎ. ಲಕ್ಷ್ಮೀನಾರಾಯಣ ನಿರೂಪಣೆಗೈದರು. ಜ್ಯೋತಿ ಎಸ್. ರಾವ್ ಪ್ರಾರ್ಥನೆಗೈದರು. ಡಾ. ಎಸ್.ವಿ. ನರಸಿಂಹನ್ ಧನ್ಯವಾದವಿತ್ತರು.