ಗೋಣಿಕೊಪ್ಪ ವರದಿ, ಮೇ 5: ಕೃಷಿ ಪೂರಕ ವಸ್ತುಗಳ ಬಳಕೆಯಲ್ಲಿ ಹೆಚ್ಚು ಜ್ಞಾನ ಪಡೆದುಕೊಳ್ಳುವ ಮೂಲಕ ಉತ್ಪಾದನಾ ವೆಚ್ಚವನ್ನು ನಿಯಂತ್ರಿಕೊಳ್ಳಲು ಸಾಧ್ಯವಿದೆ ಎಂದು ಕೃಷಿ ನಿರ್ವಹಣೆ ಹಾಗೂ ವಿಸ್ತರಣಾ ತರಬೇತಿ ಸಂಸ್ಥೆ (ಸಮೇತಿ) ದಕ್ಷಿಣ ವಿಭಾಗದ ನೋಡಲ್ ಅಧಿಕಾರಿ ಡಾ. ಪೆನ್ನೋಬಳಿ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕೃಷಿ ಇಲಾಖೆ, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ದೇಸಿ, ಕೃಷಿ ನಿರ್ವಹಣೆ ಹಾಗೂ ವಿಸ್ತರಣಾ ತರಬೇತಿ ಸಂಸ್ಥೆ ದಕ್ಷಿಣ ವಿಭಾಗ (ಸಮೇತಿ), ಕೃಷಿ ವಿಸ್ತರಣಾ ನಿರ್ದೇಶನಾಲಯ ವತಿಯಿಂದ ಕೃಷಿ ಪರಿಕರ ಮಾರಾಟಗಾರರ ಶಿಕ್ಷಣಾರ್ಥಿ ಗಳಿಗೆ ಡಿಪ್ಲೋಮಾ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೃಷಿ ಉತ್ಪಾದನೆಯಲ್ಲಿ ಮಾಹಿತಿ ಕೊರತೆಯಿಂದ ಹೆಚ್ಚು ನಷ್ಟ ಅನುಭವಿಸುವ ಮೂಲಕ ಒಂದಷ್ಟು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಬೆಳೆಗಳಿಗೆ ಬಳಸುವ ಗೊಬ್ಬರ, ಔಷಧಿ ಇಂತಹವುಗಳ ಮಾಹಿತಿ ಕೊರತೆಯಿಂದ ಕೃಷಿಕರು ಹೆಚ್ಚಾಗಿ ಬಳಸುವದರಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲಾಗದೆ ಒಂದಷ್ಟು ರೈತರು ಆತ್ಮಹತ್ಯೆಗೂ ಮುಂದಾಗಿರುವ ನಿದರ್ಶನಗಳಿವೆ. ಇದನ್ನು ನಿಯಂತ್ರಿಸಲು ಸರ್ಕಾರ ಕೃಷಿ ಪರಿಕರ ಮಾರಾಟಗಾರರಿಗೆ ವಿಶೇಷ ತರಬೇತಿ ನೀಡುವ ಮೂಲಕ ಕೃಷಿಕರಿಗೆ ಕೃಷಿ ವಸ್ತುಗಳು ದೊರೆಯುವ ಸ್ಥಳದಲ್ಲಿಯೇ ಉತ್ತಮ ಮಾಹಿತಿ ದೊರೆಯುವಂತೆ ಯೋಜನೆ ರೂಪಿಸಿಕೊಂಡಿದೆ. ಇದರಂತೆ ಮಾರಾಟಗಾರರಿಗೆ ತರಬೇತಿ ನೀಡಿ, ಕೃಷಿ ಪೂರಕ ವಸ್ತುಗಳನ್ನು ಶಾಸ್ತ್ರೋಕ್ತವಾಗಿ ಬಳಸಲು ಸಲಹೆ ನೀಡಲಾಗುತ್ತದೆ. ಇದರಿಂದ ಔಷಧಿ, ಗೊಬ್ಬರಗಳ ಬಳಕೆ ಅವಶ್ಯಕತೆಗೆ ಬೇಕಾಗುವಷ್ಟು ಮಾತ್ರ ಬಳಸಲು ಅವಕಾಶವಿದೆ. ಇದರಿಂದ ದುಂದುವೆಚ್ಚ ನಿಯಂತ್ರಿಸಲು ಸಾಧ್ಯವಿದೆ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ನಿವೃತ್ತ ವಿಸ್ತರಣಾ ನಿರ್ದೇಶಕ ಡಾ. ಟಿ.ಹೆಚ್. ಗೌಡ ಮಾತನಾಡಿ, ಹೆಚ್ಚು ಔಷಧಿ ಬಳಕೆಯಿಂದ ವಿಷಕಾರಿ ಅಂಶವಿರುವ ಆಹಾರ ಪದಾರ್ಥ ಉತ್ಪಾದನೆಯಾಗುತ್ತಿದೆ. ಇದರ ನಿಯಂತ್ರಣಕ್ಕೆ ಪ್ರತೀ ಮಾರಾಟಗಾರರು ಮುಂದಾಗಬೇಕು. ಅವಶ್ಯಕತೆಗೆ ಅನುಗುಣವಾಗಿ ಔಷಧಿ, ಪರಿಕರಗಳನ್ನು ಮಾರಾಟ ಮಾಡಬೇಕು ಎಂದರು.

ಈ ಸಂದರ್ಭ ಒಂದು ವರ್ಷದಿಂದ ತರಬೇತಿ ಪಡೆದ 40 ಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕೆ.ಎ. ಸುಚಿತಾ ಅವರಿಗೆ ತರಬೇತಿ ತಂಡದಲ್ಲಿ ಶೇ. 96 ರಷ್ಟು ಅಂಕ ಪಡೆದ ಕಾರಣ ಟಾಪರ್ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ, ಸಂಯೋಜಕ ಡಾ. ಟಿ.ಎಸ್. ಗಣೇಶ್ ಪ್ರಸಾದ್, ಸಹ ಸಂಯೋಜಕ ಡಾ. ಆರ್.ಎನ್. ಕೆಂಚರೆಡ್ಡಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಸಾಜು ಜಾರ್ಜ್, ಕೃಷಿ ಅಧಿಕಾರಿ ಮೀರಾ ಉಪಸ್ಥಿತರಿದ್ದರು. ಹರ್ಷಲ್ ಹಾಗೂ ತಂಡದಿಂದ ರೈತಗೀತೆ ಮೂಡಿಬಂತು.

- ಸುದ್ದಿಪುತ್ರ