ವೀರಾಜಪೇಟೆ, ಮೇ. 5: ಕಾರ್ಮಿಕ ವಿರೋಧಿ ಕಾನೂನು ತಿದ್ದುಪಡಿಗಳನ್ನು ಹಿಂಪಡೆಯಬೇಕು, ತೋಟಗಳಲ್ಲಿ ನಡೆಯುತ್ತಿರುವ ಜೀತ ಪದ್ಧತಿಯನ್ನು ತೊಲಗಿಸಬೇಕು, ಪ್ರತಿ ಪಂಚಾಯಿತಿಗಳಲ್ಲಿಯು ನರೆಗಾ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವಂತೆಯು, ತಿಂಗಳಿಗೆ ರೂ. 26,000 ಕನಿಷ್ಟ ವೇತನವನ್ನು ಏರಿಸುವಂತಾಗಬೇಕೆಂದು ಸರಕಾರವನ್ನು ಒತ್ತಾಯಿಸಿ ಅಖಿಲ ಭಾರತೀಯ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಿದರು.

ಕಾರ್ಮಿಕ ದಿನಾಚರಣೆ ಅಂಗಾಗಿ ಅಖಿಲ ಭಾರತೀಯ ಕೃಷಿ ಕಾರ್ಮಿಕರ ಸಂಘದ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿಯ ಜವರಯ್ಯ ಅವರು ಮಾತನಾಡಿ ಆದಿವಾಸಿಗಳ, ದಲಿತರ ವಿರುದ್ಧ ಶೋಷಣೆಗಳು ಹೆಚ್ಚುತ್ತಿದ್ದು ಕೇಂದ್ರ ಸರಕಾರ ದೇಶವನ್ನು ಕತ್ತಲೆಗೆ ನೂಕಲಾಗುತ್ತಿದೆ. ಜನರ ಬದುಕು ಹಾಗೂ ಜಾತ್ಯಾತೀತತೆಯನ್ನು ನಾಶ ಮಾಡುತ್ತಿದೆ. ಕಾರ್ಮಿಕರು ಎಚ್ಚೆತ್ತುಕೊಂಡು ಮುಂದಿನ ದಿನದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.

ಸಂಘಟನೆಯ ಬೆಂಗಳೂರಿನ ವಕೀಲೆ ಮೈತ್ರಿ ಅವರು ಕಾರ್ಮಿಕರನ್ನುದ್ದೇಶಿಸಿ ರಾಜ್ಯ ಸರಕಾರ ತೋಟ ಕಾರ್ಮಿಕರಿಗೆ ರೂ,317 ನೀಡುವಂತೆ ಕಾನೂನು ಜಾರಿಗೆ ತಂದಿದೆಯಾದರೂ ತೋಟಗಳಲ್ಲಿ 10 ಗಂಟೆಗೂ ಹೆಚ್ಚುಕಾಲ ದುಡಿಸಿಕೊಳ್ಳುತ್ತಾರೆ. ಕಾರ್ಮಿಕರಿಗೆ ಭದ್ರತೆಯು ಇಲ್ಲದಂತಾಗಿದೆ ಎಂದರು.

ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಕೆ. ಮೋಹನ್ ಮಾತನಾಡಿ, ಕಾರ್ಮಿಕ ಸಂಘಟನೆಯನ್ನು ಬಲಪಡಿಸಿ ಮುಂದಿನ ದಿನದಲ್ಲಿ ಸೌಲಭ್ಯಕ್ಕಾಗಿ ಹೋರಾಟ ನಡೆಸಲಾಗುವದು ಎಂದರು.

ಎ.ಐ.ಸಿ.ಸಿ.ಟಿ.ಯು. ಸಂಘಟನೆಯ ಅಪ್ಪಣ್ಣ, ಕೃಷಿ ಕಾರ್ಮಿಕ ಸಂಘಟನೆಯ ಪಿ.ಎಸ್. ಮುತ್ತ, ಪೌರ ಕಾರ್ಮಿಕ ಸಂಘಟನೆಯ ಷಣ್ಮುಗ, ತೋಲ ಅವರುಗಳು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು. ಮೊದಲಿಗೆ ಪಟ್ಟಣದ ತೆಲುಗರ ಬೀದಿಯಿಂದ ಹೊರಟು ಜೈನರಬೀದಿ, ದೊಡ್ಡಟ್ಟಿಚೌಕಿಯಿಂದ ಮುಖ್ಯ ರಸ್ತೆಗಾಗಿ ಗಡಿಯಾರ ಕಂಬದ ಬಳಿಯಿಂದ ತಾಲೂಕು ಮೈದಾನದವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು.