ಮಡಿಕೇರಿ, ಮೇ 5: ಶ್ರೀಮಂಗಲ ಸನಿಹದ ಕುರ್ಚಿ-ಬೀರುಗ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ 7.30ರ ಸುಮಾರಿಗೆ ಯುವಕರಿಬ್ಬರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಕಾಡಾನೆಗಳು ಕಾರಿನ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಘಟನೆ ವರದಿಯಾಗಿದೆ.ಅದೃಷ್ಟವಶಾತ್ ಕಾರಿನಲ್ಲಿದ್ದ ಯುವಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ರೈತ ಸಂಘದ ಕಾರ್ಯದರ್ಶಿಯಾಗಿರುವ ಅಜ್ಜಮಾಡ ಟಿ. ಚಂಗಪ್ಪ ಹಾಗೂ ಅವರೊಂದಿಗೆ ಅಯ್ಯಣ್ಣ (ಸಿದ್ದು) ಎಂಬವರು ಆಲ್ಟೋ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭ (ಮೊದಲ ಪುಟದಿಂದ) ರಸ್ತೆಯಲ್ಲಿದ್ದ ಆನೆಯೊಂದು ತೋಟದೊಳಗೆ ನುಗ್ಗಿ ತೆರಳಿದೆ. ಈ ಆನೆ ತೆರಳಿದ್ದನ್ನು ಗಮನಿಸಿ ಇವರು ಮನೆಯತ್ತ ಹೊರಡಲು ಮುಂದಾದಾಗ ಸನಿಹದಲ್ಲಿದ್ದ ಇನ್ನೆರಡು ಕಾಡಾನೆಗಳು ಘೀಳಿಡುತ್ತಾ ಕಾರಿನತ್ತ ನುಗ್ಗಿ ಬಂದವು ಎನ್ನಲಾಗಿದೆ. ಇದರಿಂದ ವಿಚಲಿತಗೊಂಡ ಚಾಲಕ ಚಂಗಪ್ಪ ಕಾರನ್ನು ಹಿಮ್ಮುಖವಾಗಿ ಚಾಲಿಸಲು ಯತ್ನಿಸಿದ್ದಾರೆ.ಆದರೆ ಇಳಿಜಾರು ಪ್ರದೇಶವಾಗಿದ್ದರಿಂದ ಕಾರು ಹಿಂದೆ ಚಲಿಸಲಿಲ್ಲ. ಬದಲಿಗೆ ಗಾಬರಿಯ ಚಾಲನೆಯಿಂದ ಕಾರು ಹೆಡ್ ಲೈಟ್ ಸಹಿತವಾಗಿ ಮುಂದಕ್ಕೆ ಬರತೊಡಗಿದಾಗ ಲೈಟ್ ಬೆಳಕಿನಿಂದ ಆನೆಗಳು ಗಾಬರಿಗೊಂಡು ತೋಟದೊಳಗೆ ನುಗ್ಗಿದ್ದಾಗಿ ಚಂಗಪ್ಪ ‘ಶಕ್ತಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಬಳಿಕ ಇವರು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಅವರಿಗೆ ಸುದ್ದಿ ಮುಟ್ಟಿಸಿದ್ದು, ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಯುವಕರಿಬ್ಬರನ್ನು ಸುರಕ್ಷಿತವಾಗಿ ಮನೆಗೆ ತಲಪಿಸಿದ್ದಾರೆ.

ಘಟನೆಯ ಬಳಿಕ ಚಂಗಪ್ಪ ಅವರು ವ್ಯಾಟ್ಸ್‍ಪ್ ಮೂಲಕ ಸಂದೇಶ ರವಾನಿಸಿ ಇತರರು ಈ ರಸ್ತೆಯಲ್ಲಿ ಆಗಮಿಸುವ ಸಂದರ್ಭ ಎಚ್ಚರಿಕೆಯಿಂದಿರುವಂತೆ ಮುನ್ನೆಚ್ಚರಿಕೆ ನೀಡಿದ್ದರು. ಇದಕ್ಕೆ ಮುನ್ನ ಗೃಹ ಪ್ರವೇಶದ ಆಮಂತ್ರಣ ಹಂಚುತ್ತಾ ತೆರಳುತ್ತಿದ್ದ ಯುವಕರಿಬ್ಬರಿಗೂ ಆನೆ ಎದುರಾಗಿದ್ದು, ಅವರುಗಳು ತಪ್ಪಿಸಿಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಆನೆಗಳ ಉಪಟಳ ಎಲ್ಲೆ ಮೀರುತ್ತಿದ್ದು, ಜನತೆ ಆತಂಕದ ಬದುಕು ಸಾಗಿಸುವಂತಾಗಿದೆ.

ಮತ್ತೊಂದು ಪ್ರಕರಣ: ತಾ. 5 ರಂದು ಬೆಳಿಗ್ಗೆ 7.30ರ ಸಮಯದಲ್ಲಿ ಕುರ್ಚಿ ಗ್ರಾಮದಲ್ಲಿ ಮತ್ತೊಬ್ಬರನ್ನು ಆನೆ ಅಟ್ಟಿಸಿರುವ ಘಟನೆ ವರದಿಯಾಗಿದೆ. ಅಲ್ಲಿನ ನಿವಾಸಿ ಬಾದುಮಂಡ ಚಿಟ್ಟಿ (ಲಾಲ) ಎಂಬವರು ದನಗಳನ್ನು ಮೇಯಲು ಬಿಡಲು ತೆರಳುತ್ತಿದ್ದ ಸಂದರ್ಭ ಇವರನ್ನು ಅಲ್ಲಿನ ಅಜ್ಜಮಾಡ ಕುಟುಂಬದ ಐನ್‍ಮನೆ ವ್ಯಾಪ್ತಿಯಲ್ಲಿ ಆನೆ ಬೆರೆಸಿದೆ. ಈ ಸಂದರ್ಭ ಅವರು ಮರವೊಂದರ ಆಶ್ರಯ ಪಡೆದು ಬಚಾವಾಗಿರುವದಾಗಿ ತಿಳಿದು ಬಂದಿದೆ.