ವೀರಾಜಪೇಟೆ, ಮೆ 5: ಕಾರ್ಮಿಕ ದಿನದ ಅಂಗವಾಗಿ ಸರ್ಕಾರಿ ರಜೆಯ ಕಾರಣವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮವನ್ನು ಸ್ವಚ್ಛ ಮಾಡುವ ಕಾಯಕದಲ್ಲಿ ತೊಡಗಿಕೊಂಡು ಶ್ರಮದಾನ ಮಾಡಿ ತಾತಂಡ ಕುಟುಂಬದವರು ಸಮಾಜಕ್ಕೆ ಮಾದರಿಯಾದರು.
ವೀರಾಜಪೇಟೆ ಕುಕ್ಲೂರು ಗ್ರಾಮದ ತಾತಂಡ ಕುಟುಂಬಸ್ಥರು ಗ್ರಾಮ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಕಾರ್ಮಿಕ ದಿನದಂದು ಸರ್ಕಾರಿ ರಜೆಯಾದ ಕಾರಣದಿಂದಾಗಿ ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಶ್ರಮದಾನ ಮಾಡುವ ಕಾಯಕದಲ್ಲಿ ತೊಡಗಿದ್ದರು. ಬೆಳಿಗ್ಗೆ 6 ಗಂಟೆಯಿಂದ ಅರಂಭವಾದ ಸ್ವಚ್ಛತಾ ಕಾರ್ಯಕ್ರಮ 10 ಗಂಟೆಗೆ ಕೊನೆಗೊಂಡಿತ್ತು. ಕೊಡವ ಸಮಾಜದಿಂದ ಶ್ರಮದಾನ ಕಾರ್ಯಕ್ರಮ ಅರಂಭಗೊಂಡು ಕುಕ್ಲೂರು ಗ್ರಾಮದ ಮುಖ್ಯ ರಸ್ತೆಯ ಎಡಬಲದಲ್ಲಿ ಕಸ, ಪ್ಲಾಸ್ಟಿಕ್, ನಿರುಪಯುಕ್ತವಾದ ವಸ್ತುಗಳನ್ನು ಶೇಖರಣೆ ಮಾಡಿ ಪಟ್ಟಣ ಪಂಚಾಯಿತಿಯು ಕಸ ವಿಲೇವಾರಿ ಮಾಡುವ ಸ್ಥಳದಲ್ಲಿ ಕಸವನ್ನು ಹಾಕಲಾಯಿತು. ಕೊಡವ ಸಮಾಜದಿಂದ ಕುಕ್ಲೂರು ಮಾರ್ಗದ ಮೂಲಕ ತಾತಂಡ ಕುಟುಂಬದ ಐನ್‍ಮನೆಯಲ್ಲಿ ಶ್ರಮದಾನ ಕಾರ್ಯಕ್ರಮ ಕೊನೆಗೊಂಡಿತು. ತಾತಂಡ ಕುಟುಂಬದ ಹಿರಿಯರು-ಕಿರಿಯರು ಸೇರಿ 30ಕ್ಕೂ ಅಧಿಕ ಮಂದಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.