ಮಡಿಕೇರಿ, ಮೇ 4 : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಚುನಾವಣೆಯನ್ನು ಎದುರಿಸಿರುವ ನನ್ನ ಗೆಲವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿರುವ ಸಿ.ಹೆಚ್. ವಿಜಯಶಂಕರ್, ಚುನಾವಣಾ ಹಂತದಲ್ಲಿ ನಡೆದು ಹೋಗಿರುವ ಸಣ್ಣಪುಟ್ಟ ತಪ್ಪುಗಳನ್ನು ಕೆದಕುವ ಕೆಲಸವನ್ನು ಮಾಡುವದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಶಂಕರ್, ಚುನಾವಣಾ ಹಂತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರಾದಿಯಾಗಿ ಎಲ್ಲರು ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ಇದರ ನಡುವೆಯೂ ಒಳ, ಹೊರಗೆ ಶೇ.5 ರಿಂದ 10 ರಷ್ಟು ಮತ ವ್ಯತ್ಯಾಸಗಳು ಆಗಿರಬಹುದು. ಆದರೆ ಇದು ಫಲಿತಾಂಶÀದ ಮೇಲೆ ಯಾವದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಕಸ್ಮಿಕವಾಗಿ ಆಗಿಲ್ಲ. ವಿಧಾನಸಭಾ ಚುನಾವಣೆಯ ಬಳಿಕ ಈ ಎರಡೂ ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡಿದ ಹಂತದಿಂದಲೆ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸುವದಕ್ಕೆ ಅಗತ್ಯವಾದ ಮಾನಸಿಕ ಸಿದ್ಧತೆಗಳು ನಡೆದಿತ್ತು. ಹೀಗಿದ್ದೂ ಕೆಲವು ಕ್ಷೇತ್ರಗಳಲ್ಲಿ ಸೀಟು ಹಂಚಿಕೆಯಲ್ಲಿ ಒಂದಷ್ಟು ವಿಳಂಬವಾಯಿತ್ತಾದರು ಎರಡೂ ಪಕ್ಷಗಳು ಮೈತ್ರಿ ಅಭ್ಯರ್ಥಿಗಳ ಗೆಲವಿಗಾಗಿ ಶ್ರಮಿಸಿವೆ ಎಂದು ಸಮರ್ಥಿಸಿಕೊಂಡರು.

ಕೇಂದ್ರದಲ್ಲಿ ಮುಂದಿನ ಸರ್ಕಾರ ರಚನೆಗೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಲಿವೆ, ರಾಜ್ಯದಲ್ಲಿ ಹೇಗೆ ಮೈತ್ರಿ ಸರ್ಕಾರದ ರಚನೆಯಾಗಿದೆಯೋ ಅದೇ ರೀತಿ ಕೇಂದ್ರದಲ್ಲಿಯೂ ಸರ್ಕಾರ ರಚನೆಗೆ ಮೈತ್ರಿಕೂಟದ ಅನಿವಾರ್ಯತೆ ಇದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನಷ್ಟೆ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವೂ ಇದಕ್ಕೆ ಸರಿಸಮಾನ ಸ್ಥಾನಗಳನ್ನು ಪಡೆಯಲಿರುವದರಿಂದ ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಾದೇಶಿಕ ಪಕ್ಷಗಳ ಸಹಕಾರ ಅಗತ್ಯವೆಂದು ವಿಜಯಶಂಕರ್ ಭವಿಷ್ಯ ನುಡಿದರು.

18 ರಿಂದ 20 ಸ್ಥಾನ

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು 18 ರಿಂದ 20 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಯಾವದೇ ಕಾರಣಕ್ಕು 16 ಸ್ಥಾನಗಳಿಗಿಂತ ಕೆಳಕ್ಕೆ ಇಳಿಯುವ ದಿಲ್ಲವೆಂದು ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್‍ಕುಮಾರ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಪಕ್ಷದ ಎಲ್ಲಾ ಹಂತದ ಪ್ರಮುಖರು ಮತ್ತು ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಸಹಕಾರವನ್ನು ನೀಡಿದ್ದಾರೆ ಎಂದರು. ಜಿಲ್ಲಾಧ್ಯಕ್ಷನಾಗಿ ಎದುರಿಸಿದ ಪ್ರಥಮ ಚುನಾವಣೆಯಲ್ಲಿನ ಯಶಸ್ಸು ಜಿಲ್ಲೆಯಲ್ಲಿ ಕಾಂಗ್ರೆಸ್ ಗತವೈಭವ ಮರುಕಳಿಸುವ ಪ್ರಥಮ ಹೆಜ್ಜೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಸದಸ್ಯ ಟಿ.ಪಿ.ರಮೇಶ್ ಹಾಗೂ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.