ಶ್ರೀಮಂಗಲ, ಮೇ 4: ಶ್ರೀಮಂಗಲ ವ್ಯಾಪ್ತಿಯಲ್ಲಿ ತಾ. 3ರಂದು ಬೆಳಿಗ್ಗೆ ಹೆದ್ದಾರಿಯಲ್ಲಿ ರೈತನೊರ್ವನನ್ನು ಅಟ್ಟಾಡಿಸಿ ಕೊಂದು ಹಾಕಿದ ಕಾಡಾನೆ ದಾಳಿ ಪ್ರಕರಣದ ಬೆನ್ನೆಲ್ಲೆ ಇದೀಗ ಅರಣ್ಯ ಇಲಾಖೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕಟ್ಟಲು ತುರ್ತು ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಶ್ರೀಮಂಗಲ ವನ್ಯ ಜೀವಿ ವಲಯ ವ್ಯಾಪ್ತಿಗೆ ಬರುವ ಶ್ರೀಮಂಗಲ, ಕುರ್ಚಿ, ಬೀರುಗ, ಕಾಕೂರು, ಕುಮಟೂರು, ಕಾಯಿಮಾನಿ, ಮಂಚಳ್ಳಿ, ಕುಟ್ಟ ಮತ್ತು ತೈಲ ಗ್ರಾಮಗಳಲ್ಲಿನ ತೋಟಗಳಲ್ಲಿ ಸೇರಿಕೊಂಡಿರುವ ಕಾಡಾನೆ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತಾ. 5 ಮತ್ತು 6ರಂದು ಹಮ್ಮಿಕೊಂಡಿದೆ. ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ನಡೆಯಲಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಶ್ರೀಮಂಗಲ ವನ್ಯ ಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸವಣ್ಣವರ್ ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ.