ಮಡಿಕೇರಿ, ಮೇ 4: ದೇಶದಾದ್ಯಂತ ಹೆಚ್ಚುತ್ತಿರುವ ಭಯೋತ್ಪಾದನೆ, ಉಗ್ರವಾದ, ಅಸಹನೆ, ಅತ್ಯಾಚಾರದ ವಿರುದ್ಧ ಶಾಂತಿಯ ಸಂದೇಶ ಸಾರುವ ನಿಟ್ಟಿನಲ್ಲಿ ತಾ. 6 ರಂದು ಮಡಿಕೇರಿಯಲ್ಲಿ ಮೌನ ಮೆರವಣಿಗೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ಸಂಚಾಲಕ ಕೆ.ಟಿ.ಬೇಬಿಮ್ಯಾಥ್ಯು ಹಾಗೂ ವಿವಿಧ ಸಾಮಾಜಿಕ ಸಂಘಸಂಸ್ಥೆಗಳ ಪ್ರಮುಖರು, ಇಂದು ಜಗತ್ತಿನೆಲ್ಲೆಡೆ ಧರ್ಮ ಹಾಗೂ ರಾಜಕಾರಣದ ಹೆಸರಿನಲ್ಲಿ, ಪ್ರಾದೇಶಿಕ ಹಾಗೂ ಜನಾಂಗೀಯ ಭಿನ್ನತೆಯ ಹಿನ್ನೆಲೆಯಲ್ಲಿ ಮನುಷ್ಯ ಮನುಷ್ಯನನ್ನೇ ಕೊಲ್ಲುತ್ತಿರುವದು, ಯಾರದೋ ಮೇಲಿನ ದ್ವೇಷದಲ್ಲಿ ಅಮಾಯಕ ಜನರನ್ನು ಹತ್ಯೆ ಮಾಡುತ್ತಿರುವದು, ಇದಕ್ಕಾಗಿ ತನ್ನನ್ನು ತಾನೇ ಸ್ಫೋಟಿಸಿ ಆತ್ಮಾಹುತಿ ಮಾಡಿಕೊಳ್ಳುತ್ತಿರುವದು ಶಾಂತಿಪ್ರಿಯ ಜನರಲ್ಲಿ ಆತಂಕವನ್ನು ಮೂಡಿಸುತ್ತಿದೆ ಎಂದು ಹೇಳಿದರು.

ಮನುಷ್ಯ ಜಗತ್ತಿನ ಅತ್ಯಂತ ಬುದ್ಧಿವಂತ ಜೀವಿ ಎಂದು ಗುರುತಿಸಲ್ಪಟ್ಟಿದ್ದರೂ, ಜಗತ್ತಿನ ಎಲ್ಲಾ ಜೀವಚರಗಳಿಗೆ ಮಾದರಿಯಾಗಿರಬೇಕಾಗಿದ್ದ ಆತ ಇಂದು ಸಸ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಪರಿಸರದ ನಾಶಕ್ಕೆ ಮೂಲ ಕಾರಣವಾಗಿರುವದು ದುರ್ದೈವದ ಸಂಗತಿಯಾಗಿದೆ. ಅದರೊಂದಿಗೆ ಸಮಾಜಜೀವಿಯಾಗಿ ಎಲ್ಲಾ ಮಾನವ ಜನಾಂಗದ ಜೊತೆಗೆ ಸಹಬಾಳ್ವೆ ನಡೆಸುವದರಲ್ಲೂ ಮಾನವ ವಿಫಲನಾಗುತ್ತಿರುವದು ಮಾನವ ಸಂಕುಲಕ್ಕೇ ಮಾರಕವಾಗುತ್ತಿರುವದು ದುರಂತ ಎಂದು ಹೇಳಿದರು.

ಯಾವದೇ ಸಮಸ್ಯೆಗಳಿಗೆ ಭಯೋತ್ಪಾದನೆ, ಉಗ್ರವಾದ ಪರಿಹಾರವಲ್ಲ. ಶಾಂತಿಯಿಂದ ಕುಳಿತು ಚರ್ಚಿಸುವ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಅದಕ್ಕಾಗಿ ತಾಳ್ಮೆಯಿಂದ ಕಾಯುವವರೆಲ್ಲರೂ ಪ್ರಬಲವಾಗಿ ವಿರೋಧಿಸಲೇಬೇಕಾದ ಸಂದರ್ಭ ಬಂದಿದೆ. ಉಗ್ರವಾದ, ಅಸಹನೆ, ಅತ್ಯಾಚಾರದ ವಿರುದ್ಧ ಶಾಂತಿಯ ಸಂದೇಶ ಸಾರಬೇಕಾಗಿದ್ದು, ಇದಕ್ಕಾಗಿ ತಾ. 6ರಂದು ಸಂಜೆ 5ಗಂಟೆಗೆ ಮಡಿಕೇರಿಯ ಇಂದಿರಾಗಾಂಧಿ ವೃತ್ತದಿಂದ ಗಾಂಧಿ ಮೈದಾನದವರೆಗೆ ಮೌನ ಮೆರವಣಿಗೆಯ ಮೂಲಕ ಸಾಗುವದರೊಂದಿಗೆ ಎಲ್ಲರಲ್ಲೂ ಶಾಂತಿ ಸಹನೆಯ ಭಾವವನ್ನು ಬೆಳೆಸಲು ಪ್ರಯತ್ನಿಸುವದರೊಂದಿಗೆ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಭಯೋತ್ಪಾದನೆಗೆ ಧಿಕ್ಕಾರ ಹೇಳಲಾಗುವದು ಎಂದು ವಿವರಿಸಿದರು.

ಮೌನ ಮೆರವಣಿಗೆಯಲ್ಲಿ ಸರ್ವಧರ್ಮಗಳ ಗುರುಗಳು, ಸ್ವಾಮೀಜಿಗಳು ಭಾಗವಹಿಸಲಿದ್ದು, ಗಾಂಧಿಮೈದಾನದಲ್ಲಿ ಲೋಕಶಾಂತಿಗಾಗಿ ಸರ್ವಧರ್ಮ ಪ್ರಾರ್ಥನೆ ನೆರವೇರಲಿದೆ ಎಂದೂ ಅವರು ತಿಳಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಕೊಡಗು ಜಿಲ್ಲಾ ಜಮಾಆತ್‍ಗಳ ಒಕ್ಕೂಟದ ಅಧ್ಯಕ್ಷ ಜಿ.ಹೆಚ್. ಮಹಮ್ಮದ್ ಹನೀಫ್ ಮಾತನಾಡಿ, ಮಂದಿರ, ಮಸೀದಿ, ಚರ್ಚ್‍ಗಳಿರುವದೇ ಮನುಷ್ಯರಿಗೆ ಶಾಂತಿ ಕಂಡುಕೊಳ್ಳುವದಕ್ಕಾಗಿ. ಆದರೆ ಇಂದು ಅಂತಹ ಕೇಂದ್ರಗಳನ್ನೇ ಗುರಿಯಾಗಿಟ್ಟುಕೊಂಡು ಅಶಾಂತಿ ಸೃಷ್ಟಿಸಲಾಗುತ್ತಿದೆ. ಸಮಾಜವಾದ ಹಾಗೂ ಬಂಡವಾಳಶಾಹಿಗಳ ನಡುವಿನ ಸಂಘರ್ಷ ಇದಾಗಿದ್ದು, ಇದಕ್ಕಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂತಹ ಭಯೋತ್ಪಾದನೆಯ ವಿರುದ್ಧ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ. ಮುದ್ದಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಇದೀಗ ನಕ್ಸಲ್ ಚಟುವಟಿಕೆಯೂ ಗರಿಗೆದರಿಕೊಳ್ಳುತ್ತಿದ್ದು, ಶಾಂತಿಯುತವಾದ ಕೊಡಗಿನಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಅಹಿಂದ ಸಂಘಟನೆಯಲ್ಲಿ ಕೊಡಗಿನ 26 ಜನಾಂಗಗಳ ಸುಮಾರು 30 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಸೋಮವಾರದ ಕಾರ್ಯಕ್ರಮದಲ್ಲಿ ಅಹಿಂದ ಸಂಘಟನೆಯ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ. ಆ ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವದಾಗಿ ಹೇಳಿದರು.

ಇದು ಪ್ರಥಮ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಭಯೋತ್ಪಾದನೆ, ಅಶಾಂತಿಯ ವಿರುದ್ಧ ಹಂತಹಂತವಾಗಿ ಹೋರಾಟಗಳನ್ನು ಮುಂದುವರಿಸಲಾಗುವದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ರೋಮನ್ ಕ್ಯಾಥೋಲಿಕ್ ಸಂಘದ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ಹಾಗೂ ಸಮಾಜ ಸೇವಕ ಬಾಬುಚಂದ್ರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.