ಸೋಮವಾರಪೇಟೆ, ಮೇ 4: ಅರಣ್ಯ ಪ್ರದೇಶಕ್ಕೆ ಒತ್ತಿಕೊಂಡಂತೆ ಇರುವ ತಾಲೂಕಿನ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಸಂಪೂರ್ಣ ನಾಶವಾಗಿದೆ.

ಕಳೆದ 40 ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆ-ಮಾನವ ಸಂಘರ್ಷ ನಡೆಯುತ್ತಲೇ ಇದ್ದು, ಇಂದಿಗೂ ಶಾಶ್ವತ ಪರಿಹಾರ ಲಭಿಸಿಲ್ಲ. ಕಾಡಾನೆಗಳೊಂದಿಗೆ ಇನ್ನಿತರ ಕಾಡು ಪ್ರಾಣಿಗಳ ಕಾಟದ ನಡುವೆಯೇ ಯಡವನಾಡು ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ.

ಕಾಡಾನೆಗಳ ಹಾವಳಿಯಿಂದ ನಲುಗಿರುವ ಗ್ರಾಮಸ್ಥರು ಆನೆ ಕಂದಕ ಮತ್ತು ಸೋಲಾರ್ ಬೇಲಿ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಇಂದಿಗೂ ಪರಿಹಾರ ಕಂಡಿಲ್ಲ. ಕಳೆದ ಒಂದು ತಿಂಗಳಿನಿಂದ ಸುಮಾರು 15ಕ್ಕೂ ಅಧಿಕ ಆನೆಗಳು ಈ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದು, ಕೆಲವೊಮ್ಮೆ ಹಗಲಿನಲ್ಲೂ ಜನವಸತಿ ಪ್ರದೇಶದಲ್ಲಿ ಸಂಚರಿಸುವ ಮೂಲಕ ಗ್ರಾಮಸ್ಥರಿಗೆ ಭಯಾತಂಕ ಉಂಟು ಮಾಡುತ್ತಿವೆ.

ಕಳೆದ ರಾತ್ರಿಯಷ್ಟೇ ಕೃಷಿ ಪ್ರದೇಶಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು ಗ್ರಾಮದ ಜಯಪ್ರಕಾಶ್, ಚಂಗಪ್ಪ, ಸಿ.ಬಿ. ಗಿರೀಶ್, ಡಿ.ಎಂ. ರಮೇಶ್ ಅವರ ಹೊಲ, ತೋಟಗಳಲ್ಲಿ ಮನಸೋಯಿಚ್ಛೆ ಧಾಳಿ ನಡೆಸುವ ಮೂಲಕ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಫಸಲನ್ನು ನಷ್ಟಗೊಳಿಸಿವೆ. ಜಯಪ್ರಕಾಶ್ ಅವರು ತಮಗೆ ಸೇರಿದ ಹೊಲದಲ್ಲಿ ಮೊನ್ನೆಯಷ್ಟೇ ನಾಟಿ ಮಾಡಿದ್ದ ಸುವರ್ಣ ಗೆಡ್ಡೆ ಇನ್ನಿಲ್ಲದಂತೆ ಧ್ವಂಸವಾಗಿದೆ.

ಸ್ಥಳಕ್ಕೆ ಸೋಮವಾರಪೇಟೆ ವಲಯಾರಣ್ಯಾಧಿಕಾರಿ ಲಕ್ಷ್ಮೀಕಾಂತ್, ಅಧಿಕಾರಿ ಸತೀಶ್ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಕಾಡಾನೆಗಳ ಉಪಟಳದಿಂದ ಪಾರಾಗಲು ಅರಣ್ಯದ ಸುತ್ತಲೂ ಆನೆ ಕಂದಕ ನಿರ್ಮಿಸುವ ಭರವಸೆಯಿತ್ತಿ ದ್ದಾರೆ. ಸೋಮವಾರಪೇಟೆ-ಯಡವನಾಡು ಮಾರ್ಗ ಮಧ್ಯೆ ಇರುವ ಯಡವನಾಡು, ಇದಕ್ಕೆ ಹೊಂದಿಕೊಂಡಂತಿರುವ ಕಾಜೂರು, ಐಗೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಹಗಲಿನ ವೇಳೆಯಲ್ಲೂ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುತ್ತವೆ. ಮೊನ್ನೆಯಷ್ಟೇ ಬೇಳೂರು ಸಮೀಪದ ಕಾಟ್ನಮನೆ ಯಿಂದ ಕೋವರ್‍ಕೊಲ್ಲಿ ಭಾಗದಲ್ಲಿ ಸಂಚರಿಸಿ ತೋಟದಲ್ಲಿದ್ದ ಕೃಷಿಯನ್ನು ನಷ್ಟಗೊಳಿಸಿವೆ. ಇದರೊಂದಿಗೆ ಕಾಫಿ ತೋಟಕ್ಕೆ ಅಳವಡಿಸಿದ್ದ ಬೇಲಿಯನ್ನು ಧ್ವಂಸಗೊಳಿಸಿವೆ.

ಯಡವನಾಡು ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳು ಧಾಳಿ ನಡೆಸುತ್ತಿದ್ದು, ಹಲವಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಈಗಿನ ಭರವಸೆ ತಕ್ಷಣ ಕಾರ್ಯರೂಪಕ್ಕೆ ಬರಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಡಿ.ಎಂ. ರಮೇಶ್, ಹೇಮಂತ್, ಗಿರೀಶ್, ಮನೋಜ್, ಜಯಪ್ರಕಾಶ್, ವಿಶ್ವನಾಥ್, ಲೋಕೇಶ್, ಚಿನ್ನಪ್ಪ, ಲತೀಶ್, ಗಿರೀಶ್, ಭಾನುಪ್ರಕಾಶ್ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.