ಮಡಿಕೇರಿ, ಮೇ 4 : ಕೊಡವ ಬುಡಕಟ್ಟು ಕುಲವನ್ನು ರಾಜ್ಯಾಂಗ ಭದ್ರತೆಗೆ ಒಳಪಡಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉಸ್ತುವಾರಿಯಲ್ಲಿ ನಡೆಯುತ್ತಿರುವ ಕೊಡವರ ಕುಲಶಾಸ್ತ್ರ ಅಧ್ಯಯನ ದ್ವಿತೀಯ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ ಕೊಡವ ಸಮುದಾಯವನ್ನು ‘ಬುಡಕಟ್ಟು’ ಎಂದು ಗುರುತಿಸಲು ಅಗÀತ್ಯವಾದ ಮಾಹಿತಿಯನ್ನು ಕಲೆ ಹಾಕಲಾಗುವದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಶಾಸ್ತ್ರವನ್ನು ಅಧ್ಯಯನ ಮಾಡಿದ ತಜ್ಞರ ತಂಡ ಇಲ್ಲಿಯವರೆಗೆ ಕೊಡಗಿನ 842 ಕೊಡವ ಕುಟುಂಬ(ಒಕ್ಕ)ಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿಗಳನ್ನು ಕಲೆ ಹಾಕಿದೆ. ಇದೀಗ ಮೇ1 ರಿಂದ ಆರಂಭಗೊಂಡಿರುವ ದ್ವಿತೀಯ ಹಂತದಲ್ಲಿ ‘ಕೊಡವ ಬುಡಕಟ್ಟು’ ಸಮುದಾಯವೆಂದು ಗುರುತಿಸಲು ಸಹಾಯಕವಾಗುವ ಅಂಶಗಳನ್ನು ಸಂಗ್ರಹಿಸಲಿದೆ. ಈ ಕಾರ್ಯ ಮುಂದಿನ ಒಂದು ತಿಂಗಳ ಕಾಲ ನಡೆಯಲಿದೆ ಎಂದರು.

ಕೊಡವರನ್ನು ಬುಡಕಟ್ಟು ಸಮುದಾಯವೆಂದು ಗುರುತಿಸಲು ಅಗತ್ಯವಿರುವ ಕೊಡವ ಸಮುದಾಯದ ಮೂಲ ಇತಿಹಾಸ, ಅವರು ವಾಸವಾಗಿರುವ ಪ್ರದೇಶದ ಚಾರಿತ್ರಿಕ ನಿರಂತರತೆ, ಇತರೆ ಸಮುದಾಯಗಳೊಂದಿಗೆ ಅವರಿಗಿರುವ ಸಂಬಂಧ, ದೇವರು-ದೇವನೆಲೆ, ನಾಟಿ ಔಷಧ ಪದ್ಧತಿ, ಬುಡಕಟ್ಟು ಜಾನಪದ ಕಲೆ, ಪ್ರಧಾನ ಕಸುಬಾಗಿದ್ದ ಬೇಟೆ, ವ್ಯವಸಾಯ ಹಾಗೂ ಏಲಕ್ಕಿ ಬೆಳೆಯ ಪ್ರಾಚೀನತೆ ಮತ್ತು ಪರಂಪರೆ, ಹಬ್ಬಹರಿದಿನಗಳು, ಕೊಡವ ಲಾವಣಿ, ಆರಾಧನಾ ಪದ್ಧತಿ, ವಿವಾಹ, ಜನನ, ಮರಣಕ್ಕೆ ಸಂಬಂಧಿಸಿದ ಆಚಾರಗಳ ಬಗ್ಗೆ ಮಾಹಿತಿಗಳನ್ನು ಅಧ್ಯಯನದ ಹಂತದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಎನ್.ಯು.ನಾಚಪ್ಪ ಹೇಳಿದರು.

ಇದರೊಂದಿಗೆ ಪ್ರತಿ ಕೊಡವ ಒಕ್ಕದ ಐನ್ ಮನೆ, ಗುರು ಕಾರೋಣರ ಪವಿತ್ರ ನೆಲೆಗಳಾದ ಕನ್ನಿಕೊಂಬರೆ, ನೆಲ್ಲಕ್ಕಿ ನಡುಬಾಡೆಗಳ ಕುರಿತ ವಿಚಾರಗಳ ಕುರಿತು, ಕೊಡವ ಒಕ್ಕದ ಪಟ್ಟೆದಾರನೆಂಬ ಮುಖ್ಯಸ್ಥ ಕೊರವಕಾರನೆಂಬ ಹಿರಿಯರ ಸುಪರ್ದಿಯಲ್ಲಿನ ಒಳಾಡಳಿತ ವ್ಯವಸ್ಥೆ, ಗೆಜ್ಜೆತಂಡ್‍ನ ಮಹತ್ವದ ಬಗ್ಗೆ ಹಾಗೂ ವಿಶೇಷವಾಗಿ ಗುಡ್ಡಗಾಡು ನಿವಾಸಿಗಳಾಗಿದ್ದ ಕೊಡವರು ಆಹಾರ ಪದ್ಧತಿಯಲ್ಲಿ ಬಳಸಲ್ಪಡುತ್ತಿದ್ದ ಪುತ್ತರಿ ಕಳಂಜಿ, ಪನೆಮರಪುಟ್ಟ್, ಮದ್ದ್ ಪುಟ್ಟ್, ಚಕ್ಕೆ ಕುರು, ಬೈಂಬಳೆ, ಕುಮ್ಮು ಸೇರಿದಂತೆ ಅರಣ್ಯ ಉತ್ಪನ್ನಗಳ ಬಳಕೆಯ ಬಗ್ಗೆ, ಕೊಡವರು ಬಳಸುತ್ತಿದ್ದ ಮಣ್ಣ್ಣಿನ ತಡಿಕೆ, ಕುಡಿಕೆ, ಬೆತ್ತಗಳ ಪರಿಕರ, ಬೇಟೆ ಪದ್ಧತಿ, ನರಿ ಮಂಗಲ, ಯುದ್ಧೋಪಕರಣ, ಮಂದ್‍ಗಳೆನ್ನುವ ದೇವ ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

ಪ್ರಸ್ತುತ ಯಾವದೇ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡಬೇಕಿದ್ದಲ್ಲಿ ಅದು ಅತ್ಯಂತ ಪ್ರಾಚೀನವಾದ ಕೊಡವ ಸಮುದಾಯಕ್ಕೆ ನೀಡಬೇಕಾಗುತ್ತದೆ. ಇಂತಹ ಮಹತ್ವದ ಕಾರ್ಯಕ್ಕೆ ಪೂರಕವಾಗಿ ಕುಲ ಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಈ ಅಧ್ಯಯನದ ಭಾಗವಾಗಿ ಕೊಡವರು ನೆಲೆಸಿರುವ ಕುಗ್ರಾಮಗಳಿಗೂ ಅಧ್ಯಯನ ತಂಡ ಭೇಟಿ ನೀಡಲಿದೆ. ಪ್ರತಿಯೊಬ್ಬ ಕೊಡವರು ಅಗತ್ಯ ಮಾಹಿತಿಗಳನ್ನು ನೀಡಿ ಸಹಕರಿಸಬೇಕೆಂದು ನಾಚಪ್ಪ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖರಾದ ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಹಾಗೂ ಕಾಂಡೇರ ಸುರೇಶ್ ಉಪಸ್ಥಿತರಿದ್ದರು.