ಚೆಟ್ಟಳ್ಳಿ, ಮೇ 4: ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಗೌತಮ್ ಫ್ರೆಂಡ್ಸ್ ಆಶ್ರಯದಲ್ಲಿ ಐಪಿಎಲ್ ಮಾದರಿಯ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಮೂರ್ನಾಡುವಿನಲ್ಲಿ ಚಾಲನೆ ನೀಡಲಾಯಿತು.

ಪಂದ್ಯಾಟದ ಉದ್ಘಾಟನೆ ಮಾಡಿ ಮಾತನಾಡಿದ ಸಹಕಾರಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಪಳಗಂಡ ಪಿ. ಅಪ್ಪಣ್ಣ ಜಿಲ್ಲೆಯ ವಾಲಿಬಾಲ್ ಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು. ಮೂರ್ನಾಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿದರು.

ಈ ಸಂದರ್ಭ ಗೌತಮ್ ಫ್ರೆಂಡ್ಸ್ ಅಧ್ಯಕ್ಷ ಗೌತಮ್, ಗ್ರಾಮ ಪಂಚಾಯಿತಿ ಸದಸ್ಯ ಸಾದಿಕ್, ಕ್ರೀಡಾಕೂಟದ ಆಯೋಜಕ ಅಬ್ದುರಹಮಾನ್ (ಅಂದಾಯಿ) ಇದ್ದರು. ಲೀಗ್ ಹಂತದ ಮೊದಲ ಪಂದ್ಯಾಟವು ಚಾಂಪಿಯನ್ಸ್ ಮೂರ್ನಾಡು ಹಾಗೂ ಕಿಂಗ್ಸ್ ಸಿದ್ದಲಿಂಗಪುರ ತಂಡಗಳ ನಡುವೆ ನಡೆಯಿತು.

ಚಾಂಪಿಯನ್ಸ್ ಮೂರ್ನಾಡು ತಂಡವು 21-19 , 21-12 ಎರಡು ನೇರ ಸೆಟ್‍ಗಳಿಂದ ಗೆದ್ದಿತು. ಎರಡನೇ ಪಂದ್ಯಾಟವು ಕೂರ್ಗ್ ವಾರಿಯರ್ಸ್ ಹಾಗೂ ಎಸ್.ಆರ್.ಎಸ್ ಮೂರ್ನಾಡು ತಂಡಗಳ ನಡುವೆ ನಡೆಯಿತು.

ಎಸ್.ಆರ್.ಎಸ್ ಮೂರ್ನಾಡು ತಂಡವು 21-19, 21-07ಎರಡು ನೇರ ಸೆಟ್‍ಗಳಿಂದ ಗೆಲವು ಸಾಧಿಸಿತು. ಮೂರನೇ ಪಂದ್ಯಾಟವು ರೆಡ್ ಬುಲ್ ಫೈಟರ್ಸ್ ಹಾಗೂ ರೋಯಲ್ ಫ್ರೆಂಡ್ಸ್ ಕುಶಾಲನಗರ ತಂಡಗಳ ನಡುವೆ ನಡೆದು ಹಣಾಹಣಿಯಲ್ಲಿ ಎರಡು ನೇರ ಸೆಟ್ ಗಳಿಂದ 21-19 ,21-20 ರೆಡ್ ಬುಲ್ ಫೈಟರ್ಸ್ ಗೆಲವು ಸಾಧಿಸಿತು.

ನಾಲ್ಕನೇ ಪಂದ್ಯಾಟವು ಸಿಟಿ ರೈಡರ್ಸ್ ಹಾಗೂ ವಿಲೇಜ್ ಪ್ಯಾಂಥರ್ಸ್ ನಡುವೆ ನಡೆಯಿತು.ಮೊದಲ ಸೆಟ್ ವಿಲೇಜ್ ಪ್ಯಾಂಥರ್ಸ್ 21- 17 ಹಾಗೂ ಎರಡನೇ ಸೆಟ್ ಸಿಟಿ ರೈಡರ್ಸ್ 21-20 ಅಂಕಗಳಿಂದ ಸಿಟಿ.ರೈಡರ್ಸ್ ಗೆಲವು ಕಂಡಿತು. ಕೂರ್ಗ್ ವಾರಿಯರ್ಸ್ ಹಾಗೂ ಚಾಂಪಿಯನ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಕೂರ್ಗ್ ವಾರಿಯರ್ಸ್ ತಂಡವು ಎರಡು ನೇರ ಸೆಟ್ ಗಳಿಂದ ಜಯಗಳಿಸಿತು. ರೆಡ್ ಬುಲ್ ಫೈಟರ್ಸ್ ಹಾಗೂ ಸಿಟಿ ರೈಡರ್ಸ್ ನಡುವಿನ ಪಂದ್ಯದಲ್ಲಿ ಮೊದಲನೇ ಸೆಟ್‍ನಲ್ಲಿ ರೆಡ್ ಬುಲ್ ಫೈಟರ್ಸ್, ಎರಡನೇ ಸೆಟ್ ಹಾಗೂ ಮೂರನೇ ಸೆಟ್‍ನಲ್ಲಿ ಸಿಟಿ ರೈಡರ್ಸ್ ಗೆಲವು ಖಂಡಿತು.

ತಾ. 5ರಂದು (ಇಂದು) ಇಂದು ಸಮಾರೋಪ : ಇಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವು ಮಾದಪ್ಪ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಕೊಡಗು ಜಿಲ್ಲಾ ಜೆಡಿಎಸ್ ಮುಖಂಡ ಸಂಕೇತ್ ಪೂವಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮತ್ತಿತರರು ಭಾಗವಹಿಸಿಲಿದ್ದಾರೆ..

ಹಿರಿಯ ಆಟಗಾರರಾದ ಎಂ. ಪೊನ್ನು ಹಾಗೂ ಕೊಟ್ಟಮುಡಿ ಹಂಸ ಇವರುಗಳನ್ನು ಸನ್ಮಾನಿಸಲಾಗುವದು ಎಂದು ಕಾರ್ಯಕ್ರಮದ ಆಯೋಜಕ ಅಬ್ದುರಹಮಾನ್ ತಿಳಿಸಿದ್ದಾರೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ