ಮಡಿಕೇರಿ: ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ, ಆದರೆ ಇಂದಿನ ರಾಜಕಾರಣಿಗಳು ಕಾರ್ಮಿಕ ಸಮೂಹವನ್ನು ಮತಗಳಿಕೆಗಾಗಿ ಮಾತ್ರ ಬಳಸಿಕೊಳ್ಳುತ್ತಿರುವದು ವಿಷಾದನೀಯವೆಂದು ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ ಮುಖ್ಯ ಸಲಹೆಗಾರ ಪಿ.ಬಿ. ಚಿತ್ರಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕಾರ್ಮಿಕ ದಿನಾಚರಣೆ ಮಡಿಕೇರಿಯ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಸುಮಾರು ಶೇ.65 ರಷ್ಟು ಮಂದಿ ಕಾರ್ಮಿಕರಿದ್ದಾರೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಕಾರ್ಮಿಕ ವರ್ಗ ಪ್ರಮುಖ ಪಾತ್ರ ವಹಿಸುತ್ತಿದೆ.
ದಕ್ಷ ಮತ್ತು ಪ್ರಾಮಾಣಿಕವಾಗಿ ರಾತ್ರಿ-ಹಗಲೆನ್ನದೆ ಕಾರ್ಯ ನಿರ್ವಹಿಸುವ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ರಾಜಕಾರಣಿಗಳು ಕಾರ್ಮಿಕ ವರ್ಗವನ್ನು ಕೇವಲ ರಾಜಕೀಯ ಲಾಭದ ದೃಷ್ಟಿಯಿಂದಷ್ಟೇ ನೋಡುತ್ತಿ ರುವದು ಬೇಸರದ ಬೆಳವಣಿಗೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪಿ. ರಮೇಶ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವರ್ಗಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ ವರ್ಕ್‍ಶಾಪ್ ಕಾರ್ಮಿಕರಿಗಾಗಿ ರೂ. 50 ಸಾವಿರ ಆರ್ಥಿಕ ನೆರವನ್ನು ನೀಡಿದ ಬಂಟ್ವಾಳ ವರ್ಕ್‍ಶಾಪ್ ಕಾರ್ಮಿಕರ ಸಂಘದ ಕೊಡುಗೆಯನ್ನು ಅವರು ಇದೇ ಸಂದರ್ಭ ಸ್ಮರಿಸಿಕೊಂಡರು.
ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ ಮತ್ತೊರ್ವ ಸಲಹೆಗಾರ ಕೆ.ಹೆಚ್. ಚಂದ್ರಹಾಸ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಚರಣ್ ಬಿ.ಎಸ್., ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ಜಿ. ಚಂದ್ರ, ಉಪಾಧ್ಯಕ್ಷ ಪಿ. ವಿನೋದ್, ಪ್ರಮುಖರಾದ ಎಂ.ಬಿ. ವಿಶ್ವನಾಥ್, ಎ.ವೈ. ಲೋಕೇಶ್ ಮತ್ತಿತರ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕೂಡಿಗೆ: ಕುಶಾಲನಗರ ವರ್ಕ್‍ಶಾಪ್ ಮಾಲೀಕರ ಮತ್ತು ನೌಕರರ ಸಂಘದಿಂದ 9ನೇ ವಾರ್ಷಿಕೋತ್ಸವ ಮತ್ತು ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕೂಡಿಗೆಯ ಸರ್ಕಲ್‍ನಿಂದ ಕುಶಾಲ ನಗರದವರೆಗೆ ವಾಹನ ಸಂಚಾರದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಕುಶಾಲನಗರ ಸಂಚಾರ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಚಾಲನೆ ನೀಡಿದರು. ಈ ಸಂದರ್ಭ ಕುಶಾಲನಗರ ವರ್ಕ್‍ಶಾಪ್ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಆರ್. ಪೂವಯ್ಯ, ಉಪಾಧ್ಯಕ್ಷ ಎನ್.ಸಿ. ಗಣೇಶ್, ಕಾರ್ಯದರ್ಶಿ ವಿನ್ಸೆಂಟ್, ಖಜಾಂಚಿ ಪಿ. ಶಿವಕುಮಾರ್, ಸಹ ಕಾರ್ಯ ದರ್ಶಿ ದಿನೇಶ್‍ರೈ, ಗೌರವಾಧ್ಯಕ್ಷ ವಿ.ಪಿ. ನಾಗೇಶ್, ಸಿ. ಕೃಷ್ಣ, ಕೆ. ರಾಮದಾಸ್, ನಿರ್ದೇಶಕರಾದ ಗಣೇಶ್, ಸತೀಶ್‍ರಾವ್, ವಿ. ಬಾಬಿ, ಕೆ.ರಾಜು, ತೋಮನ್, ಚಂದ್ರಹಾಸ, ಉಮೇಶ್ ಮತ್ತಿತರರಿದ್ದರು.
ಸೋಮವಾರಪೇಟೆ: ಆಡಳಿತ ವೈಫಲ್ಯದಿಂದಾಗಿ ದೇಶಾದ್ಯಂತ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ. ಈ ಹಿನ್ನೆಲೆ ನ್ಯಾಯಾಧೀಶರು ಹಾಗೂ ವಕೀಲರ ಮೂಲಕ ಕಾರ್ಮಿಕರಿಗೆ ತಮ್ಮ ಹಕ್ಕುಗಳು ಹಾಗೂ ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಅಭಿಪ್ರಾಯಿಸಿದರು.
ತಾಲೂಕು ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪುರುಷರು ಮತ್ತು ಮಹಿಳಾ ಕಾರ್ಮಿಕರ ನಡುವೆ ವೇತನ ತಾರತಮ್ಯ ಇದೆ. ದಿನಕ್ಕೆ ಎಂಟು ಗಂಟೆಗಳ ಕೆಲಸವನ್ನು ನಿಗದಿಗೊಳಿಸಿ ಈರ್ವರಿಗೂ ಸಮಾನ ವೇತನ ನೀಡಬೇಕಿದೆ. ದೇಶದಲ್ಲಿ ಸಂಘಟಿತ ಕಾರ್ಮಿಕರು ಮಾತ್ರ ಕಾನೂನಿನಡಿಯಲ್ಲಿ ಭದ್ರತೆಯನ್ನು ಹೊಂದಿದ್ದರೆ, ಹೆಚ್ಚಿನ ಅಸಂಘಟಿತ ಕಾರ್ಮಿಕರು ಇಂದಿಗೂ ಯಾವದೇ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವಕೀಲರಾದ ಹೇಮಚಂದ್ರ ಮಾತನಾಡಿ, ಮಾಧ್ಯಮಗಳಿಂದ ಕಾರ್ಮಿಕ ಇಲಾಖೆಯಲ್ಲಿ ರೂ. 2ಸಾವಿರ ಕೋಟಿ ಅನುದಾನ ಬಳಕೆಯಾಗದೇ ಇರುವದು ಬೆಳಕಿಗೆ ಬಂದ ನಂತರ, ಕಾರ್ಮಿಕರಿಗೆ ಸರ್ಕಾರದ ಯೋಜನೆಯ ಲಾಭ ಪಡೆಯಲು ಸಾಧ್ಯವಾಯಿತು ಎಂದರು.
ತಾಲೂಕು ಕಾರ್ಮಿಕ ಇಲಾಖೆಯ ಸಂಪರ್ಕಾಧಿಕಾರಿ ಮಹದೇವಸ್ವಾಮಿ ಮಾತನಾಡಿ, ಕಾರ್ಮಿಕರು ಕನಿಷ್ಟ ವೇತನ ಯೋಜನೆಯಡಿಯಲ್ಲಿ 8 ಗಂಟೆ ಕೆಲಸ ಮಾಡಬೇಕಿದೆ. ಹೆಚ್ಚುವರಿ ಕೆಲಸಕ್ಕೆ ಹೆಚ್ಚಿನ ಹಣ ಪಡೆಯಬಹುದು. ಇಲ್ಲಿಯವರೆಗೆ ತಾಲೂಕು ಕಾರ್ಮಿಕ ಇಲಾಖೆಯಲ್ಲಿ 1077 ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದು, ವಿವಿಧ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಕಾರ್ಮಿಕರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ಹಾಗೂ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯಿಸಿದರು.
ನೆಲ್ಲಿಹುದಿಕೇರಿ: ಕೊಡಗು ಕರಕುಶಲ ಸಂಘ ನೆಲ್ಲಿಹುದಿಕೇರಿ-ಸಿದ್ದಾಪುರ ಇವರ ವತಿಯಿಂದ ನೆಲ್ಲಿಹುದಿಕೇರಿ ಕುಂಬಾರಗುಂಡಿಯ ಭಜನಾ ಮಂದಿರದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕರಕುಶಲ ಕರ್ಮಿ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸುನೀಲ್ ಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ರಾಜ್ಯ ಕರಕುಶಲ ಸಂಘ ಹಾಗೂ ಸುರುಚಿ ಹೆಚ್.ಪಿ.ಓ. ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸುನೀಲ್ ಕುಮಾರ್ ಕರಕುಶಲ ಕರ್ಮಿಗಳಿಗೆ ಸರ್ಕಾರದಿಂದ ಬರುವ ಅನುದಾನ ಹಾಗೂ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಮೇಶ್, ಚಂದ್ರ ಕೆ.ಕೆ., ಶ್ರೀನಿವಾಸ್ ಕೆ., ಸಂತೋಷ್, ಅನೀಶ್ ಹಾಗೂ ಇತರರು ಉಪಸ್ಥಿತರಿದ್ದರು.ಕುಶಾಲನಗರ: ಕುಶಾಲನಗರದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಕೆಲವು ಸಂಘ-ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ಮಿಕರ ದಿನಾಚರಣೆ ಆಚರಣೆ ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಆರ್. ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪೊಲೀಸ್ ಉಪ ಅಧೀಕ್ಷಕರಾದ ದಿನಕರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಹಲವರ ತ್ಯಾಗ, ಬಲಿದಾನಗಳು ಅವಿಸ್ಮರಣೀಯ. ಅದರಂತೆ ದೇಶ ಕಟ್ಟುವ ಕಾಯಕದಲ್ಲಿ ದುಡಿಯುವ ಶ್ರಮಿಕ ವರ್ಗದ ಪಾತ್ರ ಕೂಡ ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಉದ್ಯಮಿಗಳಾದ ವಿ.ಪಿ. ನಾಗೇಶ್, ಕೆ. ರಾಮದಾಸ್, ಕೃಷ್ಣ, ಕೊಡಗು ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ವಿ.ಪಿ. ಶಶಿಧರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ, ಸಂಘದ ಮಾಜಿ ಅಧ್ಯಕ್ಷ ಮದನ್ ಹಾಗೂ ಪದಾಧಿಕಾರಿಗಳು ಇದ್ದರು.
ಸಂಘದ ಖಜಾಂಚಿ ಎಂ.ಡಿ. ರಂಜಿತ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು, ಪ್ರತೀಶಾ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕೂಡಿಗೆಯಿಂದ ಚಂಡೆ ವಾದ್ಯದೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಶಾಲನಗರದವರೆಗೆ ಸಂಘದ ಸದಸ್ಯರು ಮೆರವಣಿಗೆ ನಡೆಸಿದರು.
ಸೋಮವಾರಪೇಟೆ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಕಾಯಕ ದಿನಾಚರಣೆ ಕಾರ್ಯಕ್ರಮ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಯಿತು. ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಯಮಿ ಎಂ.ಡಿ. ರಂಗಸ್ವಾಮಿ ಉದ್ಘಾಟಿಸಿದರು. ಪ್ರತಿಯೊಬ್ಬರೂ ಕೂಡ ಕಾರ್ಮಿಕರಾಗಿದ್ದು ಆರ್ಥಿಕತೆ, ವಿದ್ಯಾಭ್ಯಾಸ, ಸಾಮಥ್ರ್ಯಕ್ಕೆ ಅನುಗುಣವಾದ ವಿಭಿನ್ನ ಕೆಲಸಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಹಣಗಳಿಸಲು ಶ್ರಮಿಸುವ ಪ್ರತಿಯೊಬ್ಬರೂ ಕೂಡ ಆದಾಯದಲ್ಲಿ ಉಳಿತಾಯ ಮಾಡುವ ಕಲೆ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಕಾರ್ಮಿಕರ ಹಕ್ಕು, ಸೌಲಭ್ಯ, ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು. ಲೇಖಕರ ಬಳಗದ ಉಪಾಧ್ಯಕ್ಷ ಎಂ.ಇ. ಮೊಯಿದ್ದೀನ್ ಪ್ರಾಸ್ತಾವಿಕ ನುಡಿಗಳಾಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಘಟಕದ ಅಧ್ಯಕ್ಷ ಪಿ. ಮಹದೇವಪ್ಪ, ಕುಶಾಲನಗರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ್, ವೀರಶೈವ ಸಮಾಜದ ಮುಖಂಡ ಹಾಲಪ್ಪ ಇದ್ದರು.
ವೀರಾಜಪೇಟೆ: ಇಂದಿನ ಸಮಾಜದಲ್ಲಿ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿರುವದರಿಂದ ಕಾರ್ಮಿಕರ ವರ್ಗದ ಪ್ರಭುತ್ವ ಅಧಿಕಾರ ಬರುವಂತಹ ಅಗತ್ಯ ಹೋರಾಟ ನಡೆಸಬೇಕಾಗಿದೆ ಎಂದು ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ಐ.ಆರ್. ದುರ್ಗಾಪ್ರಸಾದ್ ಹೇಳಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ವೀರಾಜಪೇಟೆಯ ಸಿ.ಐ.ಟಿ.ಯು. ಸಂಘಟನೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ದುರ್ಗಾಪ್ರಸಾದ್ ಅವರು ಕಾರ್ಮಿಕರನ್ನುದ್ದೇಶಿಸಿ ಕಾರ್ಮಿಕರು ಹೋರಾಟ ನಡೆಸುವದು ಕೇವಲ ಸೌಲಭ್ಯಗಳಿಗಾಗಿ ಮಾತ್ರ ಆಗಬಾರದು ಕಾರ್ಮಿಕ ವರ್ಗಕ್ಕೂ ಅಧಿಕಾರ ದೊರಕುವಂತಾಗಬೇಕು. ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯದಂತೆ ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಉತ್ತಮ ಮಾರ್ಗವನ್ನು ಪೋಷಕರು ತೋರಿಸಬೇಕು. ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸುವಂತಾಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಖಜಾಂಚಿ ಎ.ಸಿ. ಸಾಬು ಮಾತನಾಡಿ, ಕಾರ್ಮಿಕರುಗಳು ಶೋಷಣೆಗೆ ಒಳಗಾಗುತ್ತಿರುವದರಿಂದ ಬಲಿಷ್ಠವಾಗಿ ಸಂಘಟಿತರಾಗಬೇಕಾಗಿದೆ. ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸಂಘಟನೆಯ ಮೂಲಕ ಪಡೆದುಕೊಳ್ಳಲು ಕಾರ್ಮಿಕರು ಮುಂದಾಗಬೇಕು ಎಂದರು.
ಸಂಘಟನೆಯ ನಗರ ಸಮಿತಿ ಸಂಚಾಲಕ ಶಿವಪ್ಪ ಕಾರ್ಮಿಕರನ್ನುದ್ದೇಶಿಸಿ ಮತನಾಡಿದರು. ವೇದಿಕೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ನಗರ ಅಧ್ಯಕ್ಷ ಮಧು, ಕಾರ್ಯದರ್ಶಿ ಕಾಶಿಂ, ಕಾರ್ಮಿಕ ಸಂಘಟನೆಯ ಹಮೀದ್, ಧನಲಕ್ಷ್ಮಿ, ವಿಜಯ, ಅಶೋಕ್ ಹಾಗೂ ತಾಲೂಕಿನ ತಿತಿಮತಿ, ಚೆನ್ನನಕೋಟೆ, ಬಾಡಗ, ಕುಟ್ಟಂದಿ ಇತರೆಡೆಗಳಿಂದಲೂ ಕಾರ್ಮಿಕರು ಭಾಗವಹಿಸಿದ್ದರು.
ಮಡಿಕೇರಿ: ಮಡಿಕೇರಿ ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟದ ವಾರ್ಷಿಕ ಮಹಾಸಭೆ ನಗರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷ ರವಿ ಕೆ. ಆಚಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಬಲವರ್ಧನೆ ಮತ್ತು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಯಿತು. ಸಭೆಗೂ ಮೊದಲು ಗಣಪತಿ ಹೋಮ ಹಾಗೂ ವಿಶೇಷ ಪೂಜೆ ನಡೆಯಿತು. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು.