ಸೋಮವಾರಪೇಟೆ,ಮೇ.2: ನಡೆದಾಡುವ ದಾರಿಗಾಗಿ ಉಂಟಾಗಿದ್ದ ಗಲಭೆ ಈರ್ವರ ಕೊಲೆಯೊಂದಿಗೆ ಅಂತ್ಯವಾಗಿದೆ. ದೊಡ್ಡಮಳ್ತೆಯಲ್ಲಿ ಸುಮಾರು 40 ಮೀಟರ್ ಉದ್ದದ ರಸ್ತೆಗಾಗಿ ಸಂಬಂಧಿಕರ ನಡುವೆಯೇ ಕಲಹಗಳು ನಡೆಯುತ್ತಿದ್ದು, ತಾಯಿ-ಮಗಳ ಸಾವಿನೊಂದಿಗೆ ಜಾಗದ ಗಲಾಟೆ ಮುಕ್ತಾಯವಾಗಿದೆ. ಬರ್ಬರವಾಗಿ ಈರ್ವರನ್ನು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ದೊಡ್ಡಮಳ್ತೆ ಗ್ರಾಮದ ಕವಿತ ಮತ್ತು ಜಗಶ್ರೀ ಅವರುಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ದಿಲೀಪ್‍ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ದೊಡ್ಡಮಳ್ತೆ ಗ್ರಾಮದ ದಿ. ವೀರರಾಜು ಅವರ ಪತ್ನಿ ಕವಿತ (45) ಅವರು ತನ್ನ ಪತಿಯ ಸಾವಿನ ನಂತರ ಉಳಿದಿದ್ದ ಆಸ್ತಿಯನ್ನು ನೋಡಿಕೊಂಡು ಮಕ್ಕಳಿಬ್ಬರಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ವೀರರಾಜು ಅವರ 2ನೇ ಪತ್ನಿಯಾಗಿದ್ದ ಕವಿತ ಅವರಿಗೆ ಮೊದಲೇ ಮದುವೆಯಾಗಿದ್ದು, ಇದು ಎರಡನೇ ವಿವಾಹ. ಜಗಶ್ರೀ ಮೊದಲನೇ ಪತಿಯ ಮಗಳಾಗಿದ್ದರೆ, ಪುತ್ರ ಮೇಘ ಮದನ್‍ರಾಜ್ ಎರಡನೇ ಪತಿಯ ಪುತ್ರ.ಕಳೆದ 10 ವರ್ಷಗಳ ಹಿಂದೆ ವೀರರಾಜು

(ಮೊದಲ ಪುಟದಿಂದ) ಅವರು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೂ ಮುನ್ನ ವೀರರಾಜು ಅವರು ದಿಲೀಪ್‍ನ ಚಿಕ್ಕಪ್ಪ ಗಣೇಶ್ ಅವರಿಂದ 40 ಸೆಂಟ್ ಜಾಗವನ್ನು ಖರೀದಿಸಿದ್ದರು. ಇದೇ ಜಾಗವನ್ನು ದಾಟಿಕೊಂಡು ದಿಲೀಪ್‍ಗೆ ಸೇರಿದ 60 ಸೆಂಟ್ ಜಾಗಕ್ಕೆ ತೆರಳಬೇಕಿತ್ತು. ಹೀಗಾಗಿ ಆಸ್ತಿ ಖರೀದಿಸುವ ಸಂದರ್ಭವೇ ದಾರಿಯನ್ನು ಬಿಟ್ಟುಕೊಡುವ ಬಗ್ಗೆ ಮಾತುಕತೆಗಳು ನಡೆದಿತ್ತು ಎನ್ನಲಾಗಿದೆ.

ಆ ನಂತರ 40 ಸೆಂಟ್ ಗದ್ದೆ ಜಾಗವನ್ನು ವೀರರಾಜು ಕುಟುಂಬ ಕಾಫಿ ತೋಟವನ್ನಾಗಿ ಪರಿವರ್ತಿಸಿದ್ದರೆ, ದಿಲೀಪ್ ತನ್ನ ಜಾಗದಲ್ಲಿ ಮನೆಯನ್ನು ಕಟ್ಟಲು ಮುಂದಾಗಿದ್ದ. ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಿಂದ ಸರ್ಕಾರದ ಯೋಜನೆಯಡಿ ಇವನಿಗೆ ಮನೆಯೂ ಮಂಜೂರಾಗಿದ್ದು, ಅದರಂತೆ ತನ್ನ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದ. ಇಲ್ಲಿಯವರೆಗೂ ಕವಿತ ಅವರೊಂದಿಗೆ ಉತ್ತಮ ಬಾಂಧವ್ಯವೇ ಇತ್ತು.

ತಳಪಾಯವನ್ನು ತೆಗೆಯುವ ಸಂದರ್ಭ ಕವಿತ ಅವರೇ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಇದಾಗಿ ಮನೆಯ ಕಟ್ಟಡ ನಿರ್ಮಾಣವಾಗುವ ಸಂದರ್ಭ ದಿಲೀಪ್ ಮತ್ತು ಕವಿತ ನಡುವೆ ಸಣ್ಣ ವಿಷಯಕ್ಕೆ ವಾಗ್ವಾದ ನಡೆದಿದ್ದು, ಅಲ್ಲಿಂದ ಮನಸ್ತಾಪ ಉಂಟಾಗಿದೆ. ದಿಲೀಪ್ ಮೇಲೆ ಹಗೆ ಸಾಧಿಸುತ್ತಲೇ ಬರುತ್ತಿದ್ದ ಕವಿತ, ಈತನ ಮನೆಗೆ ತೆರಳುವ ದಾರಿಯ ವಿಷಯದಲ್ಲಿ ಆಗಾಗ್ಗೆ ಪೊಲೀಸರಿಗೆ ದೂರು ನೀಡುತ್ತಿದ್ದರು. ಪೊಲೀಸರೂ ಸಹ ಎರಡೂ ಕಡೆಯವರನ್ನು ಕರೆಸಿ ತೀರ್ಮಾನ ಮಾಡಿ ಕಳುಹಿಸುತ್ತಿದ್ದರು.

ಈ ನಡುವೆ ದಿಲೀಪ್ ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ಬಾಗಿಲು, ಕಿಟಕಿಗಳನ್ನು ಕವಿತ ಅವರೇ ಕತ್ತಿಯಿಂದ ಕಡಿದು ಹಾಕಿದ್ದು, ಈ ಬಗ್ಗೆ ಜಗಳವೇರ್ಪಟ್ಟು ದಿಲೀಪ್‍ನ ಪತ್ನಿ ಮತ್ತು ಕವಿತ ನಡುವೆ ಘರ್ಷಣೆ ಸಂಭವಿಸಿತ್ತು. ಇದಾದ ನಂತರ ಕವಿತ ಅವರು ತಮಗೆ ಸೇರಿದ ತೋಟಕ್ಕೆ ಅಳವಡಿಸಿರುವ ಗೇಟ್‍ಗೆ ಬೀಗ ಜಡಿದು ದಿಲೀಪ್‍ನ ಮನೆಗೆ ತೆರಳುವ ರಸ್ತೆಯನ್ನು ತಡೆದಿದ್ದರು. ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ದಿಲೀಪ್ ಸೋಮವಾರಪೇಟೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಬೀಟೆ ಮರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಆರೋಪಿಯಾಗಿದ್ದು, ದೊಡ್ಡಮಳ್ತೆಯ ಬಸ್ ನಿಲ್ದಾಣದಲ್ಲಿ ‘ಬೀಟೆ ಮರ ಕಳ್ಳ ದಿಲೀಪ್’ ಎಂದು ಮಸಿಯಲ್ಲಿ ಬರೆಯಲಾಗಿತ್ತು. ಇದನ್ನು ಬರೆದಿರುವದೂ ಸಹ ಕವಿತ ಎಂಬ ಬಗ್ಗೆ ದಿಲೀಪ್‍ಗೆ ಆಕ್ರೋಶವಿತ್ತು. ಆದರೂ ಸಹ ಗೋಡೆ ಬರಹವನ್ನು ಅಳಿಸುವ ಕಾರ್ಯಕ್ಕೆ ಹೋಗಿರಲಿಲ್ಲ.

ಈ ಮಧ್ಯೆ ನಿನ್ನೆ ದಿನ ಬೆಳಗ್ಗೆ ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಟ್ರಾಕ್ಟರ್‍ನಲ್ಲಿ ಇಟ್ಟಿಗೆ ತರುವ ಸಂದರ್ಭ ಗೇಟ್‍ಗೆ ಬೀಗ ಜಡಿಯಲಾಗಿತ್ತು. ಬೆಳಗ್ಗೆ 8.30 ಗಂಟೆ ಸುಮಾರಿಗೆ ಬೀಗವನ್ನು ಒಡೆದು ಒಳ ತೆರಳಿ ಇಟ್ಟಿಗೆಯನ್ನು ಇಳಿಸಿ ವಾಪಸ್ ಬರಲಾಗಿತ್ತು. ನಂತರ ಶನಿವಾರಸಂತೆಗೆ ತೆರಳಿದ ದಿಲೀಪ್ ಬೀಟೆಮರದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಎದುರು ಹಾಜರಾಗಿ ನಂತರ ದೊಡ್ಡಮಳ್ತೆಗೆ ವಾಪಸ್ ಬಂದಿದ್ದ.

ಎದುರಾದಾಗಲೇ ಹತ್ಯೆ ಮಾಡಿದ: ಹಿಂದಿನಿಂದಲೂ ತೀರಾ ಆಕ್ರೋಶಗೊಂಡಿದ್ದ ದಿಲೀಪ್ ಬೆಳಗ್ಗೆ 10.30ಕ್ಕೆ ತನ್ನ ನೂತನ ಮನೆಯ ಹತ್ತಿರ ಇದ್ದ ಸಂದರ್ಭ ಕವಿತ ಮತ್ತು ಪುತ್ರಿ ಜಗಶ್ರೀ ತಮ್ಮ ಸ್ಕೂಟಿಯಲ್ಲಿ ಆಗಮಿಸಿದ್ದಾರೆ. ತೋಟದ ಗೇಟ್ ತೆಗೆದು 5 ಮೀಟರ್ ಒಳಪ್ರವೇಶಿಸಿದಂತೆ ಎದುರಾದ ದಿಲೀಪ್‍ನೊಂದಿಗೆ ಬೀಗ ಒಡೆದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂದರ್ಭ ಏಕಾಏಕಿ ಕವಿತ ಅವರ ತಲೆ, ಕೈ ಭಾಗಕ್ಕೆ ದಿಲೀಪ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ದಿಲೀಪ್ ಜಗಶ್ರೀಯತ್ತಲೂ ಎಗರಿದ್ದು, ಕುತ್ತಿಗೆ ಮತ್ತು ಕೈ ಭಾಗಕ್ಕೆ ತೀವ್ರ ಪ್ರಹಾರ ನಡೆಸಿದ್ದಾನೆ. ಪರಿಣಾಮ ಅನತಿ ದೂರದಲ್ಲಿಯೇ ಜಗಶ್ರೀಯೂ ಸಹ ಇಹಲೋಕಕ್ಕೆ ಇತಿಶ್ರೀ ಹಾಡಿದ್ದಾಳೆ.

ಕೊಲೆ ಮಾಡಿ ಠಾಣೆಗೆ ಬಂದ: ಇಷ್ಟಾದ ಮೇಲೆ ದಿಲೀಪ್ ಕತ್ತಿಯನ್ನು ದೊಡ್ಡಮಳ್ತೆ ಜಂಕ್ಷನ್‍ನಲ್ಲಿರುವ ಚಿಕನ್ ಅಂಗಡಿಯಲ್ಲಿಟ್ಟು ಏನೂ ತಿಳಿಯದಂತೆ ಕೋಳಿ ವ್ಯಾಪಾರ ಮಾಡಿಕೊಂಡಿದ್ದ. ಈ ಮಧ್ಯೆ ಇದೇ ಕವಿತ, ದಿಲೀಪ್‍ನ ಮೇಲೆ ಈ ಹಿಂದೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಚಾರ್ಜ್‍ಶೀಟ್ ಸಲ್ಲಿಸಲು ದಿಲೀಪ್‍ನ ಸಹಿ ಅಗತ್ಯವಾದ ಹಿನ್ನೆಲೆ ಠಾಣೆಯಿಂದ ಕರೆ ಮಾಡಿದ್ದಾರೆ.

ಅಷ್ಟರಲ್ಲಾಗಲೇ ಜೋಡಿ ಕೊಲೆ ಮಾಡಿ ಮುಗಿಸಿದ್ದ ದಿಲೀಪ್, ಅತೀ ಧೈರ್ಯದಿಂದ ಸಹಿ ಹಾಕಲೆಂದು ಮಧ್ಯಾಹ್ನ 12.30ರ ಸುಮಾರಿಗೆ ಠಾಣೆಗೆ ಬಂದಿದ್ದಾನೆ. ಈ ಸಂದರ್ಭ ‘ಠಾಣಾಧಿಕಾರಿಗಳು ಬರಲಿ;ಅಲ್ಲಿಯವರೆಗೂ ಕುಳಿತಿರು’ ಎಂದು ದಿಲೀಪ್‍ನನ್ನು ಠಾಣೆಯಲ್ಲೇ ಕೂರಿಸಿಕೊಂಡಿದ್ದಾರೆ. ಇದೇ ಸಮಯಕ್ಕೆ ದೊಡ್ಡಮಳ್ತೆಯಿಂದ ಠಾಣೆಗೆ ಕರೆ ಬಂದಿದ್ದು, ಕವಿತ ಮತ್ತು ಜಗಶ್ರೀಯ ಕೊಲೆ ಮಾಹಿತಿ ನೀಡಿದ್ದಾರೆ. ಮೊದಲೇ ಗಲಾಟೆಗಳು ನಡೆಯುತ್ತಿದ್ದ ದಿಲೀಪ್‍ನನ್ನು ಹೊರಹೋಗದಂತೆ ತಡೆದು ಠಾಣೆಯ ಒಳಗಿನ ಕೊಠಡಿಯಲ್ಲಿ ಕೂಡಿಟ್ಟಿದ್ದಾರೆ.

ಟ್ರೀಟ್‍ಮೆಂಟ್‍ಗೆ ಬಾಯ್ಬಿಟ್ಟ: ಮೊದಮೊದಲು ಪ್ರಕರಣದ ಬಗ್ಗೆ ಏನೂ ತಿಳಿಯದಂತೆ ಇದ್ದ ದಿಲೀಪ್ ಪೊಲೀಸರ ‘ಸ್ಪೆಷಲ್ ಟ್ರೀಟ್‍ಮೆಂಟ್‍ನ ತನಿಖೆ’ಯಲ್ಲಿ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ನಂತರ ಕೊಲೆಗೆ ಬಳಸಿದ ಕತ್ತಿಯನ್ನು ತನ್ನ ಕೋಳಿ ಅಂಗಡಿಯಿಂದಲೇ ತೆಗೆದುಕೊಟ್ಟಿದ್ದಾನೆ. ತಾ. 1ರಂದು ಗ್ರಾಮದಲ್ಲಿ ಜೋಡಿ ಮೃತದೇಹಗಳ ಅಂತ್ಯಸಂಸ್ಕಾರ ನಡೆಯುತ್ತಿದ್ದ ಸಂದರ್ಭವೇ ಪೊಲೀಸರು ಆರೋಪಿ ದಿಲೀಪ್‍ನನ್ನು ಕರೆದುಕೊಂಡು ಗ್ರಾಮದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಈ ಮಧ್ಯೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ತೆರಳುವ ಮುನ್ನವೇ ತನಗೆ ಪರಿಚಯವಿರುವ ವಕೀಲರೋರ್ವರಿಗೆ ಕರೆಮಾಡಿ ಎಲ್ಲಾ ವಿಷಯ ತಿಳಿಸಿದ್ದು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾತುಕತೆ ನಡೆಸಿದ್ದ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರ ಮಾರ್ಗದರ್ಶನ ದೊಂದಿಗೆ ಡಿವೈಎಸ್‍ಪಿ ದಿನಕರ್ ಶೆಟ್ಟಿ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್‍ರಾಜ್ ಸೇರಿದಂತೆ ಸಿಬ್ಬಂದಿಗಳು ಇಡೀ ಪ್ರಕರಣದ ತನಿಖೆ ನಡೆಸಿದ್ದಾರೆ.

ಒಟ್ಟಾರೆ ಒಂದಿಷ್ಟು ದಾರಿಗಾಗಿ ನಡೆಯುತ್ತಿದ್ದ ಶಿತÀಲ ಸಮರ ಈರ್ವರ ಪ್ರಾಣ ಹತ್ಯೆಯೊಂದಿಗೆ ಪರ್ಯಾವಸಾನಗೊಂಡಿದೆ. ದಾರಿಗಾಗಿಯೇ ಕಾದಾಡುತ್ತಿದ್ದ ದಿಲೀಪನೂ ಸಹ ಇದೀಗ ಜೈಲು ಸೇರಿದ್ದಾನೆ. ಇತ್ತ ಕವಿತ ಅವರ ಪುತ್ರ, 8ನೇ ತರಗತಿಯ ವಿದ್ಯಾರ್ಥಿ ಮೇಘಮದನ್‍ರಾಜ್ ತನ್ನ ಅಮ್ಮ ಮತ್ತು ಅಕ್ಕನನ್ನು ಕಳೆದುಕೊಂಡು ಕಣ್ಣೀರಾಕುತ್ತಿದ್ದಾನೆ. ಜಗಶ್ರೀಯ ಸಾವಿನ ಸುದ್ದಿ ತಿಳಿಯದ ಅನೇಕ ಸ್ನೇಹಿತೆಯರು ಆಕೆಯ ಮೊಬೈಲ್‍ಗೆ ಕರೆ ಮಾಡುತ್ತಿದ್ದು, ‘ಹಲೋ.. ಜಗಶ್ರೀ ಇಲ್ವಾ?’ ಎಂದು ಕೇಳುತ್ತಿದ್ದಾರೆ!

- ಸತ್ಯದೇವ್