ನಾಪೋಕ್ಲು, ಮೇ 4: ಇಲ್ಲಿನ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ಮಕ್ಕಿ ಶಾಸ್ತಾವು ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಅಜ್ಜಪ್ಪ ಕೋಲ, ಮಧ್ಯಾಹ್ನ ಚಾಮುಂಡಿ ಕೋಲಗಳು ನಡೆದವು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು. ದೇವಾಲಯದ ವತಿಯಿಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಅಪರಾಹ್ನ ಜರುಗಿದ ವಿಷ್ಣುಮೂರ್ತಿ ಕೋಲವನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿದರು. ಕೆಂಡದ ರಾಶಿಯ ಮೇಲೆ ಚಾಮುಂಡಿ ತೆರೆ ಬೀಳುವ ಮೇಲೆರಿ ಕಾರ್ಯಕ್ರಮ ರೋಚಕವಾಗಿತ್ತು. ವೈವಿಧ್ಯಮಯ ಕೋಲಗಳ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಶಾಸ್ತಾವು ದೇವರ ವಾರ್ಷಿಕ ಉತ್ಸವ ಸಂಪನ್ನಗೊಂಡಿತು.
ಉತ್ಸವದ ಅಂಗವಾಗಿ ಶುಕ್ರವಾರ ಎತ್ತು ಹೇರಾಟ ನಡೆಯಿತು. ರಾತ್ರಿ ನಡೆದ ದೀಪಾರಾಧನೆ ಕಾರ್ಯಕ್ರಮವನ್ನು (ಅಂದಿಬೊಳಕ್) ಸಹಸ್ರಾರು ಭಕ್ತರು ವೀಕ್ಷಿಸಿದರು.