ಮಡಿಕೇರಿ, ಮೇ 3: ನಗರದ ಹೊರವಲಯದಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ತಾ. 7 ರಂದು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ತಿಳಿಸಿದರು. ತಾ. 6 ರ ಸಂಜೆ ವೆಂಕಟರಮಣ ಹರಿಸೇವೆಯೊಂದಿಗೆ ಜಾತ್ರೆ ಆರಂಭಗೊಳ್ಳಲಿದ್ದು, ತಾ. 7 ರಂದು ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ 6.30ಕ್ಕೆ ಗಣಪತಿ ಹೋಮ ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥಸ್ನಾನ, ಕಳಸ ಪೂಜೆ, ನೈವೇದ್ಯ ಪ್ರಸಾದ, ಮಹಾಮಂಗಳಾರತಿ, 11.45ರ ಶುಭ ಕಾಲದಂದು ದೇವಿಯ ರಥೋತ್ಸವ ಜರುಗಲಿದೆ. ನಂತರ ತುಲಾಭಾರ, ತಲೆಮುಡಿ ತೆಗೆಯುವದು, ತೀರ್ಥಸ್ನಾನ, ಉರುಳುಸೇವೆ, ಕುಂಕುಮ ಅರ್ಚನೆ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದರು.
ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಹಾಗೂ 12.30ಕ್ಕೆ ತಾಯಿಯ ದರ್ಶನವಾಗಲಿದೆ. ಸಂಜೆ 6 ಗಂಟೆಗೆ ದೇವಾಲಯದ ಆವರಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದೀಪಾಲಂಕಾರ ಆಕರ್ಷಿಸಲಿದೆ. ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಗೋವಿಂದಸ್ವಾಮಿ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08272-224668, ಮೊ. 9480730523 ಸಂಪರ್ಕಿಸಬಹುದಾಗಿದೆ ಎಂದರು. ದೇವಾಲಯದ ಭಕ್ತರಾದ ಕಿಶನ್ ಪೂವಯ್ಯ ಹಾಗೂ ಚುಮ್ಮಿ ದೇವಯ್ಯ ಮಾತನಾಡಿ ಜಾತಿ, ಮತ, ಭೇದವಿಲ್ಲದೆ ದೇವಾಲಯದಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಭಕ್ತರೇ ಸೇರಿ ಜಾತ್ರೆಯನ್ನು ನಡೆಸುವದು ಇಲ್ಲಿನ ವಿಶೇಷವೆಂದರು. ದೇವಾಲಯ ಟ್ರಸ್ಟ್ ಮೂಲಕ ಮಡಿಕೇರಿ ಮತ್ತು ಆವೃತ್ತಿಯಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ಅತಿವೃಷ್ಟಿ ಸಂಭವಿಸಿದಾಗ ಸಂತ್ರಸ್ತರಾದ ಕುಟುಂಬಗಳ ಸುಮಾರು 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗಿದೆ ಎಂದು ತಿಳಿಸಿದರು. ದೇವಾಲಯದ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವಾರ್ಷಿಕೋತ್ಸವಕ್ಕೂ ಮೊದಲು ಕಾಮಗಾರಿಯನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಸೂದನ ಹರೀಶ್ ಉಪಸ್ಥಿತರಿದ್ದರು.