ಸೋಮವಾರಪೇಟೆ, ಮೇ 3: ಕಳೆದ ಕೆಲ ವರ್ಷಗಳ ಹಿಂದೆ ದಾನದ ರೂಪದಲ್ಲಿ ನೀಡಲಾಗಿರುವ, ರೇಂಜರ್ ಬ್ಲಾಕ್‍ಗೆ ಒತ್ತಿಕೊಂಡಂತಿರುವ ಜಾಗ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ಎರಡೂ ಸಮುದಾಯದ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುವ ನಿಟ್ಟಿನಲ್ಲಿ ಪ್ರಕರಣ ಗಂಭೀರತೆ ಪಡೆಯುತ್ತಿದೆ.

ಪಟ್ಟಣದ ನಿವಾಸಿಯಾಗಿದ್ದ ಸಂಗಮನಾಥ್ ಎಂಬವರು ಕಳೆದ 1950ರಲ್ಲಿ ರೇಂಜರ್ ಬ್ಲಾಕ್‍ನಲ್ಲಿರುವ ಸುಮಾರು 11 ಏಕರೆ ಜಾಗವನ್ನು ಮಸೀದಿಗೆ ದಾನಪತ್ರ ಮುಖೇನ ನೀಡಿದ್ದಾರೆ ಎನ್ನಲಾಗಿದ್ದು, ಈ ಜಾಗದ ಒಂದು ಬದಿಯಲ್ಲಿ ಇರುವ ವನದುರ್ಗಿ, ಚೌಡಿ, ಗುಳಿಗ ದೇವಾಲಯಕ್ಕೆ ಇದೇ ಜಾಗದ ಮುಖಾಂತರ ತೆರಳಬೇಕಾಗಿದೆ.

ಈ ಜಾಗದ ಒಳಗೆಯೇ ಇರುವ ಚೌಡಿ ದೇವರಿಗೆ ಅನೇಕ ದಶಕ ಗಳಿಂದಲೂ ಸ್ಥಳೀಯರು ವರ್ಷ ಕ್ಕೊಮ್ಮೆ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದು, ಪ್ರಸಕ್ತ ವರ್ಷದ ಪೂಜೆಗೆ ಅಲ್ಪಸಂಖ್ಯಾತ ಸಮುದಾಯದ ಕೆಲವರು ತಡೆಯೊಡ್ಡಲು ಯತ್ನಿಸಿದ ನಂತರ ಇದೀಗ ಈ ಜಾಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಈ ಸ್ಥಳದಲ್ಲಿರುವ ದೇವರುಗಳಿಗೆ ವರ್ಷಕ್ಕೊಮ್ಮೆ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿಕೊಂಡು ಬರುತ್ತಿದ್ದು, ಇಲ್ಲಿಗೆ ತೆರಳಬೇಕಾದರೆ ಮಸೀದಿಗೆ ನೀಡಲ್ಪಟ್ಟ ಜಾಗವನ್ನೇ ದಾರಿಯನ್ನಾಗಿ ಬಳಸಿಕೊಳ್ಳಬೇಕಿದೆ. ಈ ಮಧ್ಯೆ ಪ್ರಸಕ್ತ ವರ್ಷದ ಪೂಜೆಯನ್ನು ನಡೆಸಲು ಬಿಡುವದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಕೆಲವರು ಆಕ್ಷೇಪ ಎತ್ತಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಅಂತಿಮವಾಗಿ ಪೊಲೀಸ್ ತುಕಡಿಯನ್ನು ನಿಯೋಜಿಸಿ ಪೂಜೋತ್ಸವವನ್ನು ನಡೆಸಲಾಗಿದೆ.

ದೇವರ ಸ್ಥಳಗಳಿಗೆ ತೆರಳಲು ಜೆಸಿಬಿಯಿಂದ ಸಣ್ಣ ದಾರಿಯನ್ನು ನಿರ್ಮಿಸಿಕೊಂಡಿದ್ದು, ಪೂಜೆ ಮುಗಿದ ನಂತರ ಮಸೀದಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತೆ ಜೆಸಿಬಿಯನ್ನು ಬಳಸಿಕೊಂಡು ದಾರಿಯನ್ನು ಮುಚ್ಚಿದ್ದಾರೆ ಎಂಬ ಆರೋಪ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಕೇಳಿಬಂದಿದೆ. ಈ ಸ್ಥಳವನ್ನು ಮಸೀದಿಗೆ ದಾನವಾಗಿ ನೀಡಿದ್ದು, ವಕ್ಪ್ ಬೋರ್ಡ್‍ನ ಉಸ್ತುವಾರಿಗೆ ವಹಿಸಲಾಗಿದೆ. ಇಂತಹ ಸ್ಥಳದಲ್ಲಿ ರಸ್ತೆ, ಪೂಜೆ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಕೆಲವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ ಪ್ರಸಕ್ತ ಸಾಲಿನ ಪೂಜೆಗೆ ತಡೆಯೊಡ್ಡುವ ಸಂಭವ ಇದ್ದುದರಿಂದ ಪೊಲೀಸ್ ಸುಪರ್ದಿಯಲ್ಲೇ ಪೂಜೆ ನೆರವೇರಿದೆ.

ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‍ಪಿ ಸಹಿತ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿವಾದಕ್ಕೆ ಆಸ್ಪದ ನೀಡುತ್ತಿರುವ ಜಾಗವನ್ನು ಸರ್ವೆ ಮಾಡುವಂತೆ ಮಸೀದಿಯ ಪದಾಧಿಕಾರಿಗಳು ಅರ್ಜಿ ಸಲ್ಲಿಸಿದ ಹಿನ್ನೆಲೆ, ಸರ್ವೆ ಇಲಾಖೆಯ ಈರ್ವರು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜಿಪಿಎಸ್ ಮುಖಾಂತರ ಸರ್ವೆ ಕಾರ್ಯ ನಡೆಸಿದ್ದಾರೆ. ಇದಕ್ಕೆ ಆಕ್ಷೇಪ ಎತ್ತಿರುವ ಸ್ಥಳೀಯರು ಸರ್ವೆ ಮಾಡುವ ಮುನ್ನ ಸ್ಥಳೀಯ ನಿವಾಸಿಗಳಿಗೆ ಯಾವದೇ ನೋಟೀಸ್ ನೀಡಿಲ್ಲ. ಈ ಹಿನ್ನೆಲೆ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಚೈನ್ ಹಿಡಿದು ಸರ್ವೆ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ. ವಿವಾದಕ್ಕೆ ಎಡೆಮಾಡಿಕೊಡುತ್ತಿರುವ ಸುಮಾರು 11.6 ಏಕರೆ ಜಾಗ ಅಧ್ಯಕ್ಷರು, ಹನಫಿ ಜಾಮೀಯಾ ಮಸೀದಿ ಎಂಬ ಹೆಸರಿನಲ್ಲಿದ್ದು, ಇದೇ ಹೆಸರಿನಲ್ಲಿ ಆರ್‍ಟಿಸಿ ಇರುವ ಬಗ್ಗೆಯೂ ತಿಳಿದುಬಂದಿದೆ.

ಸರ್ವೆ ನಡೆಸುವ ಸಂದರ್ಭ ಡಿವೈಎಸ್‍ಪಿ ದಿನಕರ್ ಶೆಟ್ಟು, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿಗಳಾದ ಶಿವಶಂಕರ್, ನಂದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಒಟ್ಟಾರೆ ಮಸೀದಿಗೆ ದಾನವಾಗಿ ನೀಡಿರುವ ಜಾಗದ ಒಳಗೆ ಚೌಡಿ, ಗುಳಿಗ ದೇವಾಲಯಗಳಿದ್ದು, ವಾರ್ಷಿಕ ಪೂಜೆಯೂ ನೆರವೇರುತ್ತಿರುವದರಿಂದ ಪ್ರಕರಣ ಸಂಕೀರ್ಣತೆಗೆ ಒಳಪಟ್ಟಿದೆ. ಸೂಕ್ಷ್ಮ ಪ್ರಕರಣವಾಗಿಯೂ ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಎರಡೂ ಸಮುದಾಯಗಳ ಮುಖಂಡರು, ಪೊಲೀಸ್, ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ಹರಿಸಬೇಕಿದೆ.

ದಾಖಲೆಗಳು ಮಸೀದಿಯ ಪರವಾಗಿ ಇದೆ ಎಂದು ಒಂದು ಗುಂಪು ಹೇಳುತ್ತಿದ್ದರೆ, ದೇವಾಲಯಕ್ಕೆ ತೆರಳಲು ರಸ್ತೆ, ಪೂಜೆಗೆ ಅವಕಾಶ ಕಲ್ಪಿಸಿದರಷ್ಟೇ ಸಾಕು. ಇದಕ್ಕೆ ಸಂಬಂಧಿಸಿದವರು ತಡೆಯೊಡ್ಡ ಬಾರದು ಎಂದು ಮತ್ತೊಂದು ಗುಂಪು ಆಗ್ರಹಿಸುತ್ತಿದೆ. ಒಟ್ಟಾರೆ ದಾನವಾಗಿ ಮಸೀದಿಗೆ ನೀಡಿದ ಜಾಗದೊಳಗೆ ದೇವಾಲಯ ಇರುವದರಿಂದ ಈ ಪ್ರಕರಣ ಎರಡೂ ಸಮುದಾಯಗಳ ನಡುವೆ ಒಡಕು ಮೂಡಿಸಿ, ಅಶಾಂತಿಗೆ ಕಾರಣವಾಗುವ ಮುನ್ನ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ವಿವಾದಕ್ಕೆ ಅಂತ್ಯಹಾಡಬೇಕಿದೆ.