ಸುಂಟಿಕೊಪ್ಪ, ಮೇ 2: ಕೆದಕಲ್ ಬಳಿ ಸ್ಕೂಟಿ ಮತ್ತು ಲಾರಿಯ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮಂಜುನಾಥನಾಯ್ಕ್ ಎಂಬಾತ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ. ಸುಂಟಿಕೊಪ್ಪದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸ್ಕೂಟಿ (ಕೆಎ12 ಎಲ್ 2951) ಮಡಿಕೇರಿಯಿಂದ ಕುಶಾಲನಗರ ಕಡೆಗೆ ಆಗಮಿಸುತ್ತಿದ್ದ ಮಿನಿಲಾರಿ (ಕೆಎ19 ಎಸಿ5009) ಮಧ್ಯರಾತ್ರಿ 1.30ರ ಸಂದರ್ಭದಲ್ಲಿ ಕೆದಕಲ್ ಬಳಿಯಲ್ಲಿ ಡಿಕ್ಕಿಯಾಗಿದೆ. ಸ್ಕೂಟಿ ಸವಾರ ಮಂಜುನಾಥನಾಯ್ಕ್ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ತೀವ್ರಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಕೂಟಿ ಸವಾರ ಮೂಲತಃ ಅರಕಲಗೋಡು ಹುಲಿಕಲ್ ಗ್ರಾಮದ ಜವರನಾಯ್ಕ್ ಎಂಬವರ ಪುತ್ರನಾಗಿದ್ದು, ತಲೆ ಭಾಗಕ್ಕೆ ತೀವ್ರಗಾಯಗೊಂಡ ಹಿನ್ನೆಲೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಲಾರಿಚಾಲಕ ಜಯಪ್ರಕಾಶ್ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ವಾಹನವನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.