ಬೆಂಗಳೂರು: ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಮೇ 29 ರಂದು ಒಟ್ಟು 63 ನಗರ ಸ್ಥಳೀಯ ಸಂಸ್ಥೆಗಳಿಗೆ (8 ನಗರಸಭೆಗಳು, 33 ಪುರಸಭೆಗಳು ಹಾಗೂ 22 ಪಟ್ಟಣ ಪಂಚಾಯಿತಿಗಳು) ಚುನಾವಣೆ ನಡೆಯಲಿದ್ದು, ಗುರುವಾರದಿಂದಲೇ ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ತಿಳಿಸಿದ್ದಾರೆ. ಆದರೆ ಮಡಿಕೇರಿ ನಗರಸಭೆ ಸೇರಿದಂತೆ ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳಿಗೆ ಈಗ ಚುನಾವಣೆ ನಡೆಯುವದಿಲ್ಲ. ರಾಜ್ಯ ಸರಕಾರವು ಹೊರಡಿಸಿರುವ ಕ್ಷೇತ್ರ ವಿಂಗಡಣೆ ಮತ್ತು ವಾರ್ಡ್ವಾರು ಮೀಸಲಾತಿ ಅಧಿಸೂಚನೆಯನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 39 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿ ದಂತೆ ಪ್ರಕರಣಗಳು ದಾಖಲಾಗಿರುತ್ತದೆ. ಮಡಿಕೇರಿ ನಗರಸಭೆಗೆ ಸಂಬಂಧಿಸಿದಂತೆ ಅಶೋಕ್ಪುರದಲ್ಲಿ ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಸ್ಥಾನವನ್ನು ನೀಡಬಾರದು, ಬೇರೆ ಕಡೆ ನೀಡಬೇಕು ಹಾಗೂ ಇನ್ನಿತರ ಹಲವು ಕ್ಷೇತ್ರ ವಿಂಗಡಣೆ ಸರಿಯಿಲ್ಲ ಎಂದು ಆಕ್ಷೇಪಿಸಿ ಕೆಲವು ನಗರಸಭಾ ಸದಸ್ಯರುಗಳು(ಈಗ ಮಾಜಿಗಳು) ತಕರಾರು ಅರ್ಜಿ ಸಲ್ಲಿಸಿದ್ದರು. ಇದರೊಂದಿಗೆ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವದರಿಂದ ಕುಂದಗೋಳ ಪಟ್ಟಣ ಪಂಚಾಯಿತಿಯನ್ನು ಹೊರತುಪಡಿಸಿ ಚುನಾವಣೆಗೆ ಬಾಕಿಯಿರುವ 103 ಸ್ಥಳೀಯ ಸಂಸ್ಥೆಗಳ ಪೈಕಿ ಒಟ್ಟು 40 ಸ್ಥಳೀಯ ಸಂಸ್ಥೆಗಳನ್ನು ಬಿಟ್ಟು 63 ಸ್ಥಳೀಯ ಸಂಸ್ಥೆಗಳಿಗೆ ಈಗ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಮಡಿಕೇರಿ ನಗರಸಭೆ ಸೇರಿದಂತೆ ರಾಮನಗರ, ಬೆಳಗಾವಿ, ಕಲಬುರಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಿನ ಎರಡನೇ ಹಂತzಲ್ಲಿ ಚುನಾವಣೆ ನಡೆಸುತ್ತಿಲ್ಲ. ಮಡಿಕೇರಿ ನಗರಸಭೆಯ ಆಡಳಿತ ಮಂಡಳಿಯ ಅಧಿಕಾರಾವಧಿ 2019ರ ಮಾರ್ಚ್ 14ಕ್ಕೆ ಪೂರ್ಣಗೊಂಡು ಆಡಳಿತಾಧಿಕಾರಿ ಯಾಗಿ ಜಿಲ್ಲಾಧಿಕಾರಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಮೊದಲನೇ ಹಂತದಲ್ಲಿ 2018 ರ ಆಗಸ್ಟ್ನಲ್ಲಿ 109 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿತ್ತು.
ಇದೀಗ ಎರಡನೇ ಹಂತಕ್ಕೆ ಮೇ 9ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ
(ಮೊದಲ ಪುಟದಿಂದ) ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮೇ 17 ಉಮೇದುವಾರಿಕೆ ಪರಿಶೀಲನೆ, 20ಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಮೇ 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮರು ಮತದಾನ ಅವಶ್ಯಕತೆಯಿದ್ದಲ್ಲಿ ಅದನ್ನು ಮೇ 30 ರಂದು ನಡೆಸಲಿದ್ದು, ತಾ. 31ಕ್ಕೆ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಸರ್ಕಾರದ ಅಧಿಸೂಚನೆ 2011 ರ ಅನ್ವಯ ನಗರಸಭೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿ ರೂ. 2 ಲಕ್ಷ, ಪುರಸಭೆಗಳಿಗೆ ರೂ.1.50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ರೂ. 1 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿರುತ್ತದೆ.
ಗ್ರಾಮ ಪಂಚಾಯಿತಿಗಳಲ್ಲಿ ಎಂದಿನಂತೆ ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದ್ದು, ಇನ್ನುಳಿದ ಸ್ಥಳೀಯ ಸಂಸ್ಥೆಗಳಿಗೆ ಇವಿಎಂ, ನೋಟಾ ಅಳವಡಿಸಲಾಗಿದೆ. ವಿವಿಪ್ಯಾಟ್ಗಳಿಗೆ ಬೇಡಿಕೆ ಇಟ್ಟಿದ್ದರೂ ಸಹ ಅದನ್ನು ತಕ್ಷಣವೇ ಪೂರೈಸಲು ಬಿಇಎಲ್ ಸಿದ್ಧವಿಲ್ಲದ ಕಾರಣ ವಿವಿಪ್ಯಾಟ್ ಅಳವಡಿಸುತ್ತಿಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ರಾಜ್ಯ ಪೊಲೀಸ್ ಇಲಾಖೆಯ ಸಹಕಾರ ಕೋರಲಾಗಿದೆ. ಐಎಎಸ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ಹಾಗೂ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ಉಪನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತಿದೆ.