ಕುಶಾಲನಗರ, ಮೇ 2: ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದ 9 ಮಂದಿಯನ್ನು ಬಂಧಿಸಿ 13 ಬೈಕ್ ಮತ್ತು ಸಾವಿರಾರು ರೂಪಾಯಿಗಳ ನಗದು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ಬುಧವಾರ ರಾತ್ರಿ ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶಕ್ಕೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ತೊರೆನೂರು ಗ್ರಾ.ಪಂ. ಸದಸ್ಯ ಸೇರಿದಂತೆ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 4 ಮಂದಿ ಪರಾರಿಯಾಗಿದ್ದಾರೆ.

ಸ್ಥಳದಿಂದ 10 ಮೊಬೈಲ್, ಇಸ್ಪೀಟ್ ಕಾರ್ಡ್‍ಗಳನ್ನು ಹಾಗೂ ರೂ. 15,500 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಸಿದ್ದಲಿಂಗಪುರ ವ್ಯಾಪ್ತಿಯ ಅರಣ್ಯ ಪ್ರದೇಶ ಕೊಡಗು ಮತ್ತು ಹಾಸನ ಜಿಲ್ಲೆಗಳ ಗಡಿ ಪ್ರದೇಶವಾಗಿದ್ದು ಈ ವ್ಯಾಪ್ತಿಯಲ್ಲಿ ನಿರಂತರವಾಗಿ ನಿಯಮಬಾಹಿರವಾಗಿ ಇಸ್ಪೀಟ್ ದಂಧೆ ನಡೆಯುತ್ತಿದ್ದು ಇದುವರೆಗೆ ದಾಳಿ ಸಂದರ್ಭ ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.ರಾತ್ರಿ ವೇಳೆ ಕಾರ್ಯಾಚರಣೆಯಲ್ಲಿ ಅರಣ್ಯದಲ್ಲಿ ಕೆಲವು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳು ಉಂಟಾಗಿವೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ತಂಡದಲ್ಲಿ ಗ್ರಾಮಾಂತರ ಠಾಣಾಧಿಕಾರಿ ನಂದೀಶ್, ಕುಶಾಲನಗರ ವಿಶೇಷ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ದಯಾನಂದ್, ಜೋಸೆಫ್, ಪ್ರಕಾಶ್ ಮತ್ತು ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಸುರೇಶ್, ಪೂವಯ್ಯ, ಅಜಿತ್, ಅರುಣ್‍ರಾವ್, ಮಲ್ಲೇಶ್, ನಾಗರಾಜು ಮತ್ತಿತರರು ಇದ್ದರು.